ದ.ಕ : ಕೊಕ್ಕೋ ಬೆಳೆಗೆ ಕೊಳೆರೋಗ!
ಮಂಗಳೂರು: ಕೃಷಿಕರು ರೈತರು ಪಡುವ ಪಾಡು ಕೆಲವೊಂದು ಸಲ ಹೇಳತೀರದು. ಹೌದು, ಮಿಶ್ರ ಬೆಳೆಯಾಗಿ ಕೃಷಿಕರಿಗೆ ಆದಾಯ ನೀಡುವ ಕೊಕ್ಕೋ ಬೆಳೆಗೆ ಈ ಬಾರಿ ಕೊಳೆ ರೋಗ ಕಾಣಿಸಿಕೊಂಡು ಇಳುವರಿ ಕಡಿಮೆಯಾಗಿದೆ.
ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಕೊಕ್ಕೋ ಬೆಳೆಗೆ ರೋಗ ಬಂದಿದ್ದು, ಕಾಯಿಗಳು ಬೆಳವಣಿಗೆ ಕುಂಠಿತಗೊಂಡು ಗಿಡದಲ್ಲೇ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಈ ಬಾರಿಯ ಬೇಸಿಗೆ ಮಳೆ ಹಾಗೂ ಪ್ರಸ್ತುತ ವಿಪರೀತ ಮಳೆಯೇ ಈ ರೋಗಕ್ಕೆ ಇದಕ್ಕೆ ಕಾರಣವಿರಬಹುದೆಂದು ರೈತರ ಅಭಿಪ್ರಾಯ.
ಜೂನ್ ತಿಂಗಳಿನಿಂದ ಸಾಮಾನ್ಯವಾಗಿ ಕೊಕ್ಕೋ ಮಾರಾಟಕ್ಕೆ ಲಭಿಸುತ್ತದೆ. ಹೆಚ್ಚಾಗಿ ವಾರಕ್ಕೊಮ್ಮೆ ಕ್ಯಾಂಪ್ಕೋ ಸಂಸ್ಥೆ ಪರಿಸರದ ಪ್ಯಾಕ್ಸ್‌ಗಳ ಮೂಲಕ ಖರೀದಿ ಮಾಡುತ್ತದೆ. ಆದರೆ ಲೆಕ್ಕಪ್ರಕಾರ ಗಮನಿಸಿದಾಗ, ವಾರಕ್ಕೆ ಒಂದು ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದ ರೈತರಿಗೆ ಈ ಬಾರಿ ಅದರ ಅರ್ಧದಷ್ಟು ಕೂಡ ಸಿಗುತ್ತಿಲ್ಲ ಎಂಬುವುದೇ ಗಮನಾರ್ಹ. ಹಾಗಾಗಿ ಹೆಚ್ಚಿನ ರೈತರಿಗೆ ನಷ್ಟ ಉಂಟಾಗಿದೆ. ಮಿಶ್ರ ಬೆಳೆಯಾಗಿರುವ ಕೊಕ್ಕೋ ಹಲವು ರೈತರಿಗೆ ಮಳೆಗಾಲದ ಆದಾಯದ ಮೂಲವಾಗಿದೆ. ಈಗ ಚಾಲ್ತಿಯಲ್ಲಿರುವ ಹಸಿ ಬೀಜಕ್ಕೆ 65 ರೂ. ಹಾಗೂ ಒಣ ಬೀಜಕ್ಕೆ 200 ರೂ.ದರ ಇದೆ. ಈ ಬಾರಿ ಉತ್ತಮ ದರವಿದ್ದರೂ ಕೊಕ್ಕೋ ಇಳುವರಿಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.
ಚಾಕಲೇಟ್ ಸಹಿತ ಇತರ ಖಾದ್ಯಗಳಲ್ಲಿ ಬಳಸುವ ಕೊಕ್ಕೋ ಬೆಳೆಗೆ ದ.ಕ. ಜಿಲ್ಲೆಯಲ್ಲಿ ಕ್ಯಾಂಪ್ಕೋ ಸಂಸ್ಥೆ ಉತ್ತೇಜನ ನೀಡುತ್ತಿದೆ. ಬೆಳೆಗಾರನಿಗೆ ಬೆಲೆ ಸ್ಥಿರತೆ ಹಾಗೂ ಬೇಡಿಕೆ ಸಿಕ್ಕಿದೆ. ಜತೆಗೆ ಕೆಲವು ಖಾಸಗಿ ಚಾಕಲೇಟ್ ಕಂಪನಿಗಳು ಕೂಡ ಕೊಕ್ಕೋ ಖರೀದಿಸುತ್ತಿವೆ. ಸಾಮಾನ್ಯವಾಗಿ ಒಂದು ಗಿಡ ವಾರ್ಷಿಕ 4ರಿಂದ 5 ಕೆಜಿ ಹಸಿ ಬೀಜ ಉತ್ಪಾದಿಸುತ್ತದೆ. ಉತ್ತಮ ಗುಣಮಟ್ಟದ ಗಿಡಗಳು ಎರಡನೇ ವರ್ಷಕ್ಕೆ ಫಸಲು ಬಿಡುತ್ತವೆ. ಕೊಕ್ಕೋ ಗಿಡಗಳು ವಾರ್ಷಿಕವಾಗಿ 2ರಿಂದ 3 ಕೆಜಿ ಒಣ ಸಾವಯವ ಪದಾರ್ಥ ಮತ್ತು ಸೊಪ್ಪನ್ನು ನೀಡುತ್ತದೆ. ತಾಲೂಕಿನ ಅನೇಕ ಕಡೆ ಕೊಕ್ಕೋ ಬೆಳೆಗೆ ಬಾವಲಿ, ಮಂಗಗಳ ಉಪಟಳ ವಿಪರೀತವಾಗಿದೆ.
ಬಹುಬೇಗ ಬೆಳೆಯುವ ಕೊಕ್ಕೋ ಗಿಡಗಳನ್ನು ಪೂನಿಂಗ್ (ಸವರುವಿಕೆ) ಮಾಡುವುದು ಅಗತ್ಯ. ಕೊಕ್ಕೋ ಬೆಳವಣಿಗೆಗೆ ಗಿಡಕ್ಕೆ ಗಾಳಿ, ಬೆಳಕು ಕೂಡ ಅಗತ್ಯ. ಇದಕ್ಕೆ ಪೂನಿಂಗ್ ಸಹಕಾರಿ. ಪೂನಿಂಗ್ ಮಾಡದಿದ್ದರೆ ಗಿಡಗಳು ಮರವಾಗಿ ಬೆಳೆಯುತ್ತದೆ. ಇದು ಮುಖ್ಯ ಕೃಷಿಗೆ ಅಡ್ಡಿಯಾಗುತ್ತದೆ. ಅಲ್ಲದೆ ತ್ವರಿತ ಹೂ ಬಿಡಲು, ಕಾಯಿಗಳನ್ನು ಕೀಳಲು ಅನುಕೂಲವಾಗುತ್ತದೆ.
ಅಡಕೆ, ತೆಂಗಿನ ತೋಟಗಳಲ್ಲಿ ಉಪ ಬೆಳೆಯಾಗಿ ಬೆಳೆಯುವ ಕೊಕ್ಕೋ ಗಿಡಗಳು ನಿಗದಿತ ಎತ್ತರದಲ್ಲಿ ಬೆಳೆಯ ಬೇಕಾದುದು ಅಗತ್ಯ. ಜತೆಗೆ ಕೊಕ್ಕೋಗೆ ತಗಲಬಹುದಾದ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಆದರೆ ಈ ಬಾರಿ ಪೂನಿಂಗ್ ಮಾಡಲಾಗಿರುವ ಗಿಡಗಳಲ್ಲೂ ರೋಗ ಕಂಡುಬಂದಿದೆ ಎಂದು ಕೃಷಿಕರು ಹೇಳುತ್ತಾರೆ.