ಇನ್ನು ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೂ ಸ್ಕೂಲ್ ಬಸ್!
ಬೆಂಗಳೂರು: ಖಾಸಗಿ ಶಾಲಾ ಮಕ್ಕಳಂತೆ ಇನ್ನು ಮುಂದೆ ಸರ್ಕಾರಿ ಶಾಲೆಯ ಮಕ್ಕಳಿಗೂ ಸ್ಕೂಲ್ ಬಸ್ ಸೌಲಭ್ಯ ದೊರೆಯಲಿದ್ದು, ಶಾಲಾ ವಾಹನ ಖರೀದಿ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.
ಶಾಲಾ ಮಕ್ಕಳನ್ನು ದೂರದ ಊರುಗಳಿಂದ ಕರೆದುಕೊಂಡು ಬರೋದಕ್ಕೆ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬಸ್ ವ್ಯವಸ್ಥೆ ಕಲ್ಪಿಸಲಿದೆ. ಈ ಬಗ್ಗೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅಧಿಕೃತ ಜ್ಞಾಪನೆ ಹೊರಡಿಸಿದ್ದು, ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಪರಿಷ್ಕೃತ ಯೋಜನೆಯ ಮಾರ್ಗಸೂಚಿಗಳು 2014ರಲ್ಲಿನ ಅನುಬಂಧ-|||ರಡಿ ಈ ಕೆಳಕಂಡ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳನ್ನು ಕರೆತರುವ ಸಲುವಾಗಿ, ಸರ್ಕಾರಿ ಶಾಲೆಗಳಿಗೆ ಮಾತ್ರ ಶಾಲಾ-ವಾಹನವನ್ನು ಖರೀದಿಸಲು ತಗಲುವ ವೆಚ್ಚವನ್ನು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಭರಿಸಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ. ಅಂದಹಾಗೇ ಶಾಲಾ ವಾಹನಕ್ಕೆ, ವಾಹನ ಚಾಲಕರ ವೇತನ ಹಾಗೂ ಪೆಟ್ರೋಲ್, ಡೀಸೆಲ್, ದುರಸ್ಥಿ ವೆಚ್ಚಗಳನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಇತರೆ ಅನುದಾನದಡಿ ವೆಚ್ಚ ಭರಿಸುವಂತೆ ಷರತ್ತು ವಿಧಿಸಿದೆ.