ನಾಯಿ ಕಚ್ಚಿ ಲಸಿಕೆ ತಗೊಂಡರೂ, ಮೃತಪಟ್ಟ ಯುವತಿ, ತನಿಖೆಯಲ್ಲಿ ಬಯಲಾಯ್ತು ಭೀಕರ ಸತ್ಯ!!!

ಕೇರಳದ ಪಲಕ್ಕಾಡ್ ಮೂಲದ 18 ವರ್ಷದ ಯುವತಿಯೋರ್ವಳು ನಾಯಿ ಕಡಿತಕ್ಕೆ ಒಳಗಾಗಿ ಲಸಿಕೆ ಪಡೆದುಕೊಂಡರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ತನಿಖೆಯ ಬಳಿಕ ಅಸಲಿ ಕಾರಣ ಏನೆಂಬುದು ಈಗ ಬಯಲಾಗಿದೆ. ನಾಯಿ ಜೋರಾಗಿ ಕಡಿದಿದ್ದರಿಂದ ಉಂಟಾದ ಆಳವಾದ ಗಾಯವೇ ರೇಬಿಸ್ ಗೆ ಕಾರಣ ಎಂದು ಪಲಕ್ಕಾಡ್ ಡಿಎಂಒ ಕೆ.ಪಿ. ರಿತಾ ಹೇಳಿದ್ದಾರೆ.

ಲಸಿಕೆ ನೀಡಿರುವುದರಲ್ಲಿ ಯಾವುದೇ ಎಡವಟ್ಟುಗಳಾಗಿಲ್ಲ, ಮೃತ ಶ್ರೀಲಕ್ಷ್ಮಿಗೆ ಗುಣಮಟ್ಟದ ಲಸಿಕೆಯನ್ನೇ ನೀಡಲಾಗಿದೆ ಎಂದು ರೀತಾ ಅವರು ಹೇಳಿದ್ದಾರೆ.

ಪಾಲಕ್ಕಾಡ್ ಮೂಲದ ಸುಗುನನ್ ಮತ್ತು ಸಿಂಧು ದಂಪತಿಯ ಪುತ್ರಿ ಶ್ರೀಲಕ್ಷ್ಮಿ(18) ಮೇ 30ರಂದು ಬೆಳಗ್ಗೆ ಕಾಲೇಜಿಗೆ ಹೋಗುವಾಗ ಅವರ ಪಕ್ಕದ ಮನೆಯ ನಾಯಿ ಆಕೆಯ ಎಡಗೈ ಕೈಬೆರಳುಗಳಿಗೆ ಕಚ್ಚಿತ್ತು. ಇದಾದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ಲಸಿಕೆಯನ್ನು ಶ್ರೀಲಕ್ಷ್ಮಿ ಪಡೆದುಕೊಂಡಿದ್ದಳು.

ಲಸಿಕೆ ಪಡೆದುಕೊಂಡರೂ ಕೆಲವು ದಿನಗಳ ನಂತರ ಆಕೆಗೆ ತೀವ್ರವಾದ ಜ್ವರ ಕಾಣಿಸಿಕೊಂಡಿತು. ತಕ್ಷಣ ಶ್ರೀಲಕ್ಷ್ಮಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆ ಸಂದರ್ಭ ರೇಬೀಸ್ ಕಾಯಿಲೆಯ ಲಕ್ಷಣಗಳು ಕಂಡುಬಂದಿತು. ಈ ಲಕ್ಷಣ ಇದೆ ಎಂದು ಗೊತ್ತಾದ ಕೂಡಲೇ ಆಕೆಯನ್ನು ತ್ರಿಸ್ಸೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ (ಜೂನ್ 30) ಬೆಳಗ್ಗೆ ಶ್ರೀ ಲಕ್ಷ್ಮಿ ಮರಣ ಹೊಂದಿದ್ದಾಳೆ.

ಆರೋಗ್ಯ ಸಚಿವರ ಸೂಚನೆ ಮೇರೆಗೆ ತನಿಖೆಗಾಗಿ ರಚಿಸಲಾಗಿದ್ದ ಕ್ಷಿಪ್ರ ತನಿಖೆಯ ತಂಡ ಶುಕ್ರವಾರ ಸಭೆ ನಡೆಸಿತು. ಸಭೆಯಲ್ಲಿ ಶ್ರೀಲಕ್ಷ್ಮಿಗೆ ನೀಡಿದ ಚಿಕಿತ್ಸೆಯ ಎಲ್ಲಾ ವಿವರಗಳನ್ನು ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀಲಕ್ಷ್ಮಿಗೆ ಕಚ್ಚಿದ ಸಾಕು ನಾಯಿಗೆ ಲಸಿಕೆ ಹಾಕಿಲ್ಲ ಎಂಬ ಅಂಶ ತಿಳಿದು ಬಂದಿದೆ. ಅಷ್ಟು ಮಾತ್ರವಲ್ಲದೇ, ಅದೇ ನಾಯಿ ಹಿಂದೊಮ್ಮೆ ತನ್ನ ಮಾಲೀಕರಿಗೂ ಕಚ್ಚಿರುವ ಸಂಗತಿ ಬಯಲಾಗಿದೆ. ಆದರೆ ನಾಯಿಯ ಮಾಲೀಕ ಲಸಿಕೆ ಪಡೆದುಕೊಂಡಿದ್ದು, ಅದು ಚಿಕಿತ್ಸೆ ಫಲಕಾರಿಯಾಗಿದೆ. ಆದರೆ, ಶ್ರೀಲಕ್ಷ್ಮಿಗೆ ಲಸಿಕೆ ಪರಿಣಾಮ ಬೀರಿಲ್ಲ.

ನಾಯಿಯ ಕಡಿತ ಆಳವಾಗಿದ್ದರಿಂದ ಶ್ರೀಲಕ್ಷ್ಮಿಗೆ ಲಸಿಕೆ ಯಾಕೆ ಪ್ರಯೋಜನವಾಗಲಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಆರೋಗ್ಯ ಕಾರ್ಯಕರ್ತರು ಶ್ರೀಲಕ್ಷ್ಮಿ ಅವರ ಮನೆಗೆ ಬಂದು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಬಾಲಕಿ ಮತ್ತು ನಾಯಿಯ ಸಂಪರ್ಕ ಬಂದವರಿಗೆ ಲಸಿಕೆ ಹಾಕುತ್ತಿದ್ದಾರೆ. ಚಿಕಿತ್ಸೆ ವೇಳೆ ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರಿಗೂ ಲಸಿಕೆ ನೀಡಲಾಗಿದೆ.

Leave A Reply

Your email address will not be published.