ಹಂಪಿಗೆ ಬಂದ ಅಂಬಾರಿ ! ಎಂದಿನಿಂದ ಸವಾರಿ ?

 

ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈಗ ಅಂಬಾರಿ ಬಸ್ಸನ್ನು ಪರಿಚಯಿಸುತ್ತಿದೆ. ಈ ಬಸ್ ಮೂಲಕ ತುಂಗಭದ್ರಾ ಜಲಾಶಯ, ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಸೇರಿದಂತೆ ಹಂಪಿ ಸ್ಮಾರಕಗಳ ವೀಕ್ಷಣೆಗೆ ಯೋಜನೆ ರೂಪಿಸಲಾಗುತ್ತಿದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣ ಹಂಪಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ವಿಶೇಷವಾಗಿ ವಿನ್ಯಾಸಗೊಳಿಸಿದ  ಡಬಲ್ ಡೆಕ್ಕರ್ ಬಸ್‌ಗಳನ್ನು ‘ಅಂಬಾರಿ’ ಪರಿಚಯಿಸಿದೆ. ಸಂದರ್ಶಕರು www.kstdc.co ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು

 ಪ್ರಾಯೋಗಿಕವಾಗಿ ಇಂದು ಹಂಪಿಯಲ್ಲಿ ಬಸ್ ಸಂಚಾರ ನಡೆಸಲಾಯಿತು. ಸಂಚಾರದ ವೇಳೆ ವಿದ್ಯುತ್ ತಂತಿ ಹಾಗು ಮರಗಿಡಗಳು ಅಡ್ಡಿಯಾಗಲಿವೆಯೇ ಎಂಬುದನ್ನು ಪರೀಕ್ಷಿಸಲಾಯಿತು. ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಅವರನ್ನು ಒಳಗೊಂಡ ಸಮಿತಿಯ ಸದಸ್ಯರು ‘ಅಂಬಾರಿ’ಯಲ್ಲಿ ಪಯಣಿಸಿ, ಅಧ್ಯಯನ ನಡೆಸಿದರು. ಟಿ.ಬಿ. ಡ್ಯಾಂ ವೃತ್ತದಲ್ಲಿನ ಪ್ರವಾಸೋದ್ಯಮ ನಿಗಮದ ಕಚೇರಿಯಿಂದ ಪ್ರಯಾಣ ಬೆಳೆಸಿದ ‘ಅಂಬಾರಿ’, ಸಂಡೂರು ಬೈಪಾಸ್‌, ಬಳ್ಳಾರಿ ರಸ್ತೆ ಮೂಲಕ ಪಾಪಿನಾಯಕನಹಳ್ಳಿ ಮಾರ್ಗದಿಂದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಎದುರಿನಿಂದ ಕಮಲಾಪುರದ ಚರ್ಚ್‌ ಬಳಿಯಿರುವ ತುಂಗಭದ್ರಾ ಕೆಳಮಟ್ಟದ ಕಾಲುವೆಯ ವರೆಗೆ ಸಂಚಾರ ಬೆಳೆಸಿತು. ಕಾಲುವೆಯ ಬಳಿ ವಿದ್ಯುತ್‌ ತಂತಿಗಳು ತೀರ ಕೆಳಭಾಗದಲ್ಲಿ ಇದ್ದದ್ದರಿಂದ ಮುಂದೆ ಸಂಚರಿಸಲಿಲ್ಲ. ಅಲ್ಲಿ ಅಧಿಕಾರಿಗಳು ಕೆಳಗಿಳಿದು ಅನ್ಯ ವಾಹನಗಳ ಮೂಲಕ ಕಮಲಾಪುರಕ್ಕೆ ತೆರಳಿದರು.

‘ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರ ಸೂಚನೆಯ ಮೇರೆಗೆ ‘ಅಂಬಾರಿ’ ಸಂಚಾರಕ್ಕೆ ಸಂಬಂಧಿಸಿದಂತೆ ಸಾಧಕ ಬಾಧಕಗಳ ಅಧ್ಯಯನ ನಡೆಸಲಾಯಿತು. ಅನೇಕ ಕಡೆಗಳಲ್ಲಿ ವಿದ್ಯುತ್‌ ಕಂಬಗಳು, ತಂತಿಗಳು ಕೆಳಭಾಗದಲ್ಲಿರುವುದು ಗಮನಕ್ಕೆ ಬಂದಿದೆ. ಕೆಲವೆಡೆ ರೆಂಬೆ, ಕೊಂಬೆಗಳು ಸುಗಮ ಸಂಚಾರಕ್ಕೆ ತೊಡಕಾಗಿವೆ. ಇನ್ನು, ಕಮಲಾಪುರದ ಕಾಲುವೆ ಬಳಿ ವಿದ್ಯುತ್‌ ತಂತಿಗಳು ಬಹಳ ಕೆಳಭಾಗದಲ್ಲಿವೆ. ಇದರ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳುವರು’ ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ವಲಯ ಅರಣ್ಯ ಅಧಿಕಾರಿ ಕೆ.ಸಿ. ವಿನಯ್‌ಕುಮಾರ್‌ ಮಾಹಿತಿ ಹಂಚಿಕೊಂಡರು.

Leave A Reply

Your email address will not be published.