ಮಂಗಳೂರು:ಭೀಕರ ಮಳೆಗೆ ಮತ್ತೊಮ್ಮೆ ಮುರಿಯಿತೇ ಮರವೂರು ಸೇತುವೆ!?? ವರುಣನ ಆರ್ಭಟಕ್ಕೆ ಕುಡ್ಲದ ಜನಜೀವನ ಅಸ್ತವ್ಯಸ್ತ
ಮಂಗಳೂರು: ಕರಾವಳಿಯಲ್ಲಿ ನಿರಂತರ ಮಳೆಯಿಂದಾಗಿ ಪೇಟೆ ಪಟ್ಟಣಗಳ ತುಂಬೆಲ್ಲಾ ಮಳೆ ನೀರು ತುಂಬಿ ಜನ ಜೀವನ ಅಸ್ತವ್ಯಸ್ತವಾಗಿರುವ ಬೆನ್ನಲ್ಲೇ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಬಳಿಯ ರಸ್ತೆಯು ಕುಸಿತಗೊಂಡಿದ್ದು, ಜನತೆ ಭೀತಿಗೊಳಗಾದ ಹಿನ್ನೆಲೆಯಲ್ಲಿ ತಕ್ಷಣ ಪಿಡಬ್ಲ್ಯೂಡಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಬಾರಿ ಇದೇ ಮರವೂರು ಸೇತುವೆ ಬಿರುಕು ಬಿಟ್ಟಿದ್ದು,ನಸುಕಿನ ವೇಳೆ ಸಾರ್ವಜನಿಕರ ಗಮನಕ್ಕೆ ಬಂದಕೂಡಲೇ ಸ್ಥಳಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ಭೇಟಿ ನೀಡಿ ಶೀಘ್ರ ದುರಸ್ತಿ ಕಾರ್ಯದ ಬಗ್ಗೆ ಮಾತುಕತೆ ನಡೆಸಿ ಆ ಬಳಿಕ ಸುಮಾರು ಒಂದು ತಿಂಗಳುಗಳ ಕಾಲ ರಸ್ತೆ ಬಂದ್ ಮಾಡಿ ದುರಸ್ತಿ ಕಾರ್ಯಮಾಡಿದ ಬಳಿಕ ಸಂಚಾರಕ್ಕೆ ಅನುವುಮಾಡಿಕೊಡಲಾಗಿತ್ತು.
ಇಂದು ಸುರಿದ ಭೀಕರ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಸಂಪೂರ್ಣ ಮುಳುಗಡೆಯಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು,ಕೆಲವೆಡೆ ನೀರಿನಲ್ಲಿ ವಾಹನಗಳು ಕೊಚ್ಚಿಕೊಂಡು ಹೋಗಿರುವ ಬಗ್ಗೆಯೂ ಸುದ್ದಿಯಾಗಿದೆ.ಅದಲ್ಲದೇ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಪದವಿ ಸಹಿತ ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ರಜೆ ಸಾರಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.