ಭೀಕರ ಮಳೆಯ ನಡುವೆ ಮಂಗಳೂರಿಗರಿಗೆ ‘ಮಲೆಜ್ಜಿ’ ಮೀನಿನ ಪರ್ಬ!!
ಮಳೆನೀರಿನೊಂದಿಗೆ ರಸ್ತೆಗೆ ಬಂದ ಬೃಹತ್ ಆಕಾರದ ಮೀನು-ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮಂಗಳೂರು: ಕರಾವಳಿಯಲ್ಲಿ ನಿರಂತರ ಮಳೆಯಿಂದಾಗಿ ಪೇಟೆ ಪಟ್ಟಣಗಳ ತುಂಬೆಲ್ಲಾ ಮಳೆ ನೀರು ತುಂಬಿ ಜನ ಜೀವನ ಅಸ್ತವ್ಯಸ್ತವಾಗಿರುವ ನಡುವೆ ನದಿಯಿಂದ ಮೀನುಗಳು ಮಳೆನೀರಿನೊಂದಿಗೆ ರಸ್ತೆಗೆ ಬಂದ ಪ್ರಸಂಗವೂ ನಡೆಯಿತು.
ಇಂದು ಸುರಿದ ಭೀಕರ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಸಂಪೂರ್ಣ ಮುಳುಗಡೆಯಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಈ ನಡುವೆ ಸ್ಥಳೀಯರಿಗೆ ಬೃಹತ್ ಆಕಾರದ ಮೀನೊಂದು ಸಿಕ್ಕಿದ್ದು,ಮಸ್ತ್ಯ ಪ್ರಿಯರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಮಂಗಳೂರಿನ ಮಹಾ ಮಳೆಗೆ ಮೀನುಗಳು ರಸ್ತೆಗೆ ಹತ್ತಿದ್ದವು. ‘ ಉಬೇರ್ ಬರ್ತುದುಂಡು ‘ ಅಂದು ಜನ ರಸ್ತೆಗೆ ಇಳಿದು ಮಲೇಜ್ಜಿ ಮೀನು ಕ್ಯಾಚಿಂಗ್ ಮಾಡುವ ದೃಶ್ಯ ಹಲವೆಡೆ ಕಂಡುಬಂದಿದೆ.
ನಗರದಲ್ಲಿ ಹೆದ್ದಾರಿಯಲ್ಲಿ ಹರಿದ ನೀರಿನಲ್ಲಿ ಪತ್ತೆಯಾದ ಮಲೆಜ್ಜಿ ಮೀನನ್ನು ಸ್ಥಳೀಯ ಯುವಕರು ಹಿಡಿದು ಮನೆಗೆ ಕೊಂಡೊಯುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವೆಡೆ ನೀರಿನಲ್ಲಿ ವಾಹನಗಳು ಕೊಚ್ಚಿಕೊಂಡು ಹೋಗಿರುವ ಬಗ್ಗೆಯೂ ಸುದ್ದಿಯಾಗಿದೆ. ಅದಲ್ಲದೇ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಪದವಿ ಸಹಿತ ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ರಜೆ ಸಾರಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.