ತೆಂಗಿನ ಮೌಲ್ಯವರ್ಧನೆಗೆ ಕೋಕೋನಟ್ ಪಿಕ್ಕಲ್ | ರೈತರ ಮುಖದಲ್ಲಿ ಮಂದಹಾಸ!
ತೆಂಗಿನ ಕಾಯಿ ದರ ಪಾತಾಳಕ್ಕೆ ಇಳಿಯುತ್ತಿದೆ. ಮಾರುಕಟ್ಟೆಯ ದರ ತೆಂಗು ನಂಬಿದ ರೈತರಿಗೆ ಈ ಬಾರಿ ಮಾರುಕಟ್ಟೆಯ ದರ ನಿಜಕ್ಕೂ ಕಂಗಾಲು ಮಾಡಿರುವುದರಲ್ಲಿ ಎರಡು ಮಾತಿಲ್ಲ. ಆದರೆ ದ.ಕ, ಉಡುಪಿ, ಕೊಡಗು, ಕಾಸರಗೋಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದ.ಕ. ತೆಂಗು ರೈತ ಉತ್ಪಾದಕರ ಕಂಪನಿಯೊಂದು ತೆಂಗಿನ ಮೂಲಕ ಆಹಾರೋತ್ಪನ್ನಗಳನ್ನು ತಯಾರಿಸಿಕೊಂಡು ತೆಂಗಿನ ಮೌಲ್ಯವರ್ಧನೆಯ ಮೂಲಕ ತೆಂಗಿಗೆ ಮತ್ತಷ್ಟು ಗೌರವ ತಂದು ಕೊಡುವ ಕೆಲಸ ಮಾಡುತ್ತಿದ್ದಾರೆ.
ಎಲ್ಲರಿಗೂ ಗೊತ್ತಿದೆ, ತೆಂಗಿನ ಕಾಯಿಯನ್ನು ಬಹಳಷ್ಟು ಸಮಯದಲ್ಲಿ ಎಣ್ಣೆಗಾಗಿ ಮಾತ್ರ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಆದರೆ ಮೌಲ್ಯವರ್ಧನೆ ಮಾಡಲು ಹೋಗಿಲ್ಲ. ಇದರಿಂದ ತೆಂಗಿನ ದರ ಕುಸಿತ ಕಾಣುವುದು ಸಾಮಾನ್ಯವಾಗಿ ಬಿಟ್ಟಿದೆ.
ಸರಿಸುಮಾರು ಹತ್ತು ತಿಂಗಳು ಬಲಿತ ತೆಂಗಿನ ಕಾಯಿಯನ್ನು ಬಳಸಿಕೊಂಡು ಉಪ್ಪಿನಕಾಯಿಯನ್ನು ಮಾಡಲಾಗುತ್ತದೆ. ಹದವಾಗಿ ಬಲಿತ ತೆಂಗಿನ ಕಾಯಿಯಲ್ಲಿ ಎಣ್ಣೆ ಅಂಶ ಕಡಿಮೆ ಇರುತ್ತದೆ. ಇದು ಉಪ್ಪಿನಕಾಯಿ ಜಾಸ್ತಿ ಸಮಯ ಕೆಡದೇ ಇರೋಕೆ ಬಹಳ ಉಪಯೋಗವಾಗುತ್ತದೆ. ಜಾಸ್ತಿ ಬಲಿತ ತೆಂಗಿನ ಕಾಯಿಯಲ್ಲಿ ಎಣ್ಣೆ ಅಂಶ ಜಾಸ್ತಿ ಇದೆ. ಉಪ್ಪಿನಕಾಯಿ ಮಾಡುವುದು ಕೊಂಚ ಕಷ್ಟ. ಈಗಾಗಲೇ ಒಂದು ಲಕ್ಷ ಬಾಟಲ್ ತೆಂಗಿನ ಕಾಯಿಯ ಉಪ್ಪಿನಕಾಯಿ ಸಿದ್ಧಗೊಂಡಿದೆ. ಕೇರಳ, ಗುಜರಾತ್ ಸೇರಿದಂತೆ ವಿದೇಶಿ ದೇಶಗಳಲ್ಲಿ ಮಾರ್ಕೆಟ್‌ಗೆ ಬಿಡುವುದು ನಮ್ಮ ಮುಖ್ಯ ಉದ್ದೇಶ ಎನ್ನುತ್ತಾರೆ ದ.ಕ. ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಎಂ.ಪ್ರಸಾದ್ ಶೆಟ್ಟಿ,
ಉಪ್ಪಿನಕಾಯಿಗೆ ಆಯ್ಕೆ ಮಾಡಿದ ಕೆಲವು ರೈತರಿಂದ ತೆಂಗಿನಕಾಯಿಗಳನ್ನು ಬೆಂಗಳೂರಿನ ಸಂಸ್ಥೆಯ ಸಂಶೋಧನಾ ವಿಭಾಗಕ್ಕೆ ಕಳುಹಿಸಿ ಉಪ್ಪಿನಕಾಯಿ ಸಿದ್ಧಪಡಿಸುವ ಕೆಲಸ ಸಾಗುತ್ತಿದೆ. ಮುಂದೆ ದಕದ ಪುತ್ತೂರಿನಲ್ಲಿ ಇದಕ್ಕಾಗಿಯೇ ತಯಾರಿಕಾ ಘಟಕವನ್ನು ಮಾಡಲಾಗುತ್ತಿದೆ. ಮೂಡುಬಿದಿರೆಯಲ್ಲೂ ಇದೇ ರೀತಿಯ ಘಟಕಕ್ಕೂ ಯೋಜನೆ ನಡೆಯುತ್ತಿದೆ ಎನ್ನುತ್ತಾರೆ ದ.ಕ. ಜಿಲ್ಲಾ ತೆಂಗು ರೈತ ಉತ್ಪದಕರ ಕಂಪನಿಯ ಉಪಾಧ್ಯಕ್ಷ ಕುಸುಮರಾಜ್.