ಆಟೋಡ್ರೈವರ್ ನಿಂದ ಮಹಾ ಸಿಎಂವರೆಗೆ ನಡೆದು ಬಂದ ಕಟ್ಟರ್ ಹಿಂದುತ್ವವಾದಿ ಶಿಂಧೆ
ಮುಂಬೈ: ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸಿದ್ದ ರಾಜಕೀಯದ ಕ್ಲೈಮ್ಯಾಕ್ಸ್ ಈಗ ರಿವೀಲ್ ಆಗಿದೆ. ಸಮಸ್ತ ಭಾರತ ಈಗ ಮೊಬೈಲ್ ಮತ್ತು ಟಿವಿಗಳಲ್ಲಿ ಕಣ್ಣು ಹುದುಗಿಸಿ ಕೂತಿದೆ. ಶಿವಸೇನೆಯ ನಾಯಕ ಏಕನಾಥ್ ಶಿಂಧೆ ಏಕಾಏಕಿ ಬಂಡಾಯವೆದ್ದು, ಶಾಸಕರು ಹಾಗೂ ಸಚಿವರನ್ನು ತನ್ನೆಡೆ ಸೆಳೆದುಕೊಂಡಾಗಿನಿಂದ ಹಿಡಿದು, ಸಿಎಂ ಆಗಿದ್ದ ಉದ್ಧವ್ ಠಾಕ್ರೆ ಅವರಿಗೆ ಬಹುಮತ ಸಾಬೀತು ಮಾಡುವಂತೆ ಸುಪ್ರೀಂಕೋರ್ಟ್ ಸೂಚಿಸಿದ್ದವರೆಗೆ ಕುತೂಹಲ ಮೂಡಿತ್ತು. ಈಗ ಬಂಡಾಯ ಎದ್ದ ಪಾಳಯದ ಆಕಾಶ ತಿಳಿಯಾಗಿದೆ. ಬಹುಮತ ಸಾಬೀತು ಪಡಿಸುವ ಮೊದಲೇ ಕೈಚೆಲ್ಲಿದ್ದ ಉದ್ಧವ್ ಠಾಕ್ರೆ ನಿನ್ನೆ ಫೇಸ್‌ಬುಕ್ ಲೈವ್‌ನಲ್ಲಿ ಬಂದು ನಿನ್ನೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಇಂದು ಬೆಳಗ್ಗೆ ರಾಜ್ಯಪಾಲರಿಂದ ಅದು ಅಂಗೀಕಾರ ಕೂಡಾ ಆಗಿದೆ.
ಇಂದು ಸಂಜೆ ಐದು ಗಂಟೆಯವರೆಗೂ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಪಡ್ನವಿಸ್ ಅವರೇ ಅಧಿಕಾರ ಸ್ವೀಕಾರ ಮಾಡಲಿದ್ದು, ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಒಂದು ಒಂದು ಸ್ಪಿನ್ ಬಾಲ್ ಬಿದ್ದು, ಆಟಕ್ಕೆ ಭಾರಿ ಟ್ವಿಸ್ಟ್ ಸಿಕ್ಕಿ, ಮುಖ್ಯಮತ್ರಿ ಆಗಬೇಕಿದ್ದ ಫಡ್ನವಿಸ್ ಅವರೇ ಖುದ್ದು ಪತ್ರಿಕಾಗೋಷ್ಠಿ ನಡೆಸಿ, ಸಿಎಂ ಸ್ಥಾನವನ್ನು ಶಿಂಧೆ ಅವರಿಗೆ ಬಿಟ್ಟುಕೊಟ್ಟಿರುವುದಾಗಿ ಘೋಷಿಸಿದ್ದರು. ರಾತ್ರಿ 7.30ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಅಂತ ಟೈಂ ಫಿಕ್ಸ್ ಮಾಡಿದ್ದರು.
ಆಗ ಶುರುವಾಗಿತ್ತು ಯಾರೀ ಏಕನಾಥ ಶಿಂಧೆ ಎಂಬ ಹುಡುಕಾಟ ?
ಮಹಾರಾಷ್ಟ್ರ ಸರ್ಕಾರವನ್ನು ಅಲ್ಲಾಡಿಸಿ, ಕೊನೆಗೆ ಉದ್ಧವ್ ಠಾಕ್ರೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ , ಮುಖ್ಯಮಂತ್ರಿ ಖುರ್ಚಿಯನ್ನೇರಲು ರೆಡಿಯಾಗಿರುವ ಶಿಂಧೆ ಯಾರು? ಅವರ ಹಿನ್ನೆಲೆ ಏನು ಎಂಬ ಕುತೂಹಲ ಯಾರಿಗೆ ಇರಲ್ಲ ಹೇಳಿ.
56 ವರ್ಷ ವಯಸ್ಸಿನ ಇವರು ಮೂಲತಃ ಇವರು ಆಟೋ ಚಾಲಕ. ವಿಚಿತ್ರ ಸಂಗತಿ ಎಂದರೆ, ಉದ್ಧವ್ ಠಾಕ್ರೆ ಅವರ ತಂದೆ ಬಾಳಾಸಾಹೇಬ್ ಠಾಕ್ರೆ ಏಕನಾಥ್ ಶಿಂಧೆ ಅವರ ರಾಜಕೀಯ ಗುರು. ಏಕನಾಥ್ ಶಿಂಧೆ ಮಹಾರಾಷ್ಟ್ರದ ಸತಾರಾ ನಿವಾಸಿ. ರಾಜಕೀಯ ವಿದ್ಯಾರ್ಥಿಯಾಗಿರುವ ಇವರು, ಬಾಳಾಸಾಹೇಬ್ ಠಾಕ್ರೆ ಅವರನ್ನು ಗುರುವಾಗಿ ಸ್ವೀಕರಿಸಿದ್ದರು. ರಾಜಕೀಯದಲ್ಲಿಯೇ ಮುಂದುವರೆಯಬೇಕು ಎನ್ನುವ ಕಾರಣಕ್ಕೆ ಸತಾರಾವನ್ನು ತೊರೆದು ಶಿವಸೇನೆಯ ಪ್ರಮುಖ ನೆಲೆಯಾದ ಥಾಣೆಗೆ ತೆರಳಿದರು.
ಶಿವಸೇನೆ ಸೇರುವ ಮುನ್ನ ಶಿಂಧೆ ಬಹಳ ಕಾಲ ಟ್ಯಾಕ್ಸಿ ಓಡಿಸುತ್ತಿದ್ದರು. ಅದಕ್ಕೂ ಮೊದಲು ಆಟೋ. ನಂತ್ರ ಪಕ್ಷದ ಕಾರ್ಯಕರ್ತರ ಸಂಘವನ್ನೂ ಆರಂಭಿಸಿದರು. 1980 ರ ದಶಕದಲ್ಲಿ ಥಾಣೆಯಲ್ಲಿ ಶಾಖಾ ಮುಖ್ಯಸ್ಥರಾಗಿದ್ದ ಶಿಂಧೆ 2004 ರಲ್ಲಿ ಥಾಣೆ ಮುನ್ಸಿಪಲ್ ಕಾರ್ಪೊರೇಟರ್ ಆಗಿದ್ದರು. ನಂತ್ರ ಶಾಸಕ. ಅವರು ನಾಲ್ಕು ವರ್ಷಗಳ ಕಾಲ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸದನದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ ಕೂಡಾ.
2004 ರಿಂದ, ಅವರು ನಾಲ್ಕು ಚುನಾವಣೆಗಳನ್ನು ಸತತ ಗೆದ್ದಿದ್ದಾರೆ ತಮ್ಮ ಮಗ ಶ್ರೀಕಾಂತ್ ಶಿಂಧೆಯನ್ನು ಕೂಡಾ ರಾಜಕೀಯಕ್ಕೆ ತಂದಿದ್ದು ಆತನನ್ನು ಕಲ್ಯಾಣ್‌ನಿಂದ ಶಿವಸೇನಾ ಸಂಸದ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಈಗ ಬಿಜೆಪಿ ಸರ್ಕಾರ ಬರುತ್ತಿರುವ ಕಾರಣ ಕರ್ನಾಟಕಕ್ಕೆ ಸಂಬಂಧಿತ ಲಾಭಗಳಿವೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.