ಮಹಾರಾಷ್ಟ್ರದ ರೆಬೆಲ್ ಶಾಸಕರಿಗೆ Y+ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ !!
ಮಹಾರಾಷ್ಟ್ರದಲ್ಲಿ ರಾಜಕೀಯ ಹಾವು-ಏಣಿಯಾಟ ಭಾರೀ ಜೋರಾಗಿ ನಡೆಯುತ್ತಿದೆ. ಇದೀಗ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಏಕನಾಥ್ ಶಿಂಧೆ ನೇತೃತ್ವದ 15 ಬಂಡಾಯ ಶಿವಸೇನೆ ಶಾಸಕರಿಗೆ ಕೇಂದ್ರ ಸರ್ಕಾರವು Y+ ಭದ್ರತೆಯನ್ನು ನೀಡಿದೆ.
ಶನಿವಾರ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಡಿಜಿಪಿ ರಜನೀಶ್ ಸೇಠ್ ಮತ್ತು ಇತರರಿಗೆ ಬರೆದ ಪತ್ರದಲ್ಲಿ ಬಂಡಾಯ ಶಾಸಕರ ಕುಟುಂಬ ಸದಸ್ಯರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಆರೋಪಿಸಿದ್ದರು. ಇದಾದ ಒಂದು ದಿನದ ಬಳಿಕ ಕೇಂದ್ರವು ಸಶಸ್ತ್ರ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯ Y+ ವರ್ಗದ ಭದ್ರತೆಯನ್ನು ಒದಗಿಸಿದೆ.
ರಮೇಶ್ ಬೋರ್ನಾರೆ, ಮಂಗೇಶ್ ಕುಡಾಲ್ಕರ್, ಸಂಜಯ್ ಶಿರ್ಸತ್, ಲತಾಬಾಯಿ ಸೋನಾವಣೆ, ಪ್ರಕಾಶ್ ಸುರ್ವೆ, ಸದಾನಂದ್ ಸರಣಾವಂಕರ್, ಯೋಗೇಶ್ ದಾದಾ ಕದಂ, ಪ್ರತಾಪ್ ಸರ್ನಾಯಕ್, ಯಾಮಿನಿ ಜಾಧವ್, ಪ್ರದೀಪ್ ಜೈಸ್ವಾಲ್, ಸಂಜಯ್ ರಾಥೋಡ್, ದಾದಾಜಿ ಭೂಸೆ, ದಿಲೀಪ್ ಲಾಂಡೆ, ಬಾಲಾಜಿ ಕಲ್ಯಾಣ್, ಸಿ.ಸಂದಿಪನ್ ಭೂಮಾ ಅವರಿಗೆ ಕೇಂದ್ರದಿಂದ ಭದ್ರತೆ ಒದಗಿಸಲಾಗಿದೆ.
ಶಿವಸೇನೆಯ 55 ಶಾಸಕರ ಪೈಕಿ ಕನಿಷ್ಠ 38 ಶಾಸಕರ ಬೆಂಬಲವಿದೆ ಎಂದು ಶಿಂಧೆ ಹೇಳಿಕೊಂಡಿದ್ದಾರೆ. ಇದು 288 ಸದಸ್ಯರ ಮಹಾರಾಷ್ಟ್ರ ಶಾಸಕಾಂಗ ಸಭೆಯಲ್ಲಿ ಪಕ್ಷದ ಮೂರನೇ ಎರಡರಷ್ಟು ಬಲವನ್ನು ಹೊಂದಿದೆ.