ಮಹಾಪತನದತ್ತ ಮಹಾರಾಷ್ಟ್ರ ಸರಕಾರ
ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ನಿನ್ನೆಯಿಂದ ಉದ್ಭವಿಸಿದೆ. ಈ ಅಸ್ಥಿರತೆಯ ಮುಂದಿನ ಭಾಗವಾಗಿ, ಇಂದೇ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನವಾಗಲಿದೆ ಎಂಬ ಮಾತೊಂದು ಹರಿದಾಡುತ್ತಿದೆ. ಸದ್ಯ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲರು ಇಬ್ಬರೂ ಕೊರೊನಾ ಪೀಡಿತರಾಗಿದ್ದು, ವರ್ಚುವಲ್ ಸಂಪುಟ ಸಭೆ ನಡೆಸಿ ಉದ್ಭವ್ ಠಾಕ್ರೆ ರಾಜೀನಾಮೆ ಘೋಷಿಸುತ್ತಾರೆ ಮತ್ತು ಸಚಿವ ಸಂಪುಟವನ್ನು ವಿಸರ್ಜಿಸುತ್ತಾರೆ ಎಂಬ ಮಾಹಿತಿ ಇದೆ. ಆದರೆ ಆ ಸಾಧ್ಯತೆ ಕಮ್ಮಿ ಎನ್ನಲಾಗುತ್ತಿದೆ. ಶಿವಸೇನೆಯು ಕೊನೆಯ ಕ್ಷಣದವರೆಗೆ ಸರಕಾರ ಉಳಿಸಿಕೊಳ್ಳಲು ಶತಪ್ರಯತ್ನ ಮಾಡುವಲ್ಲಿ ನಿರತವಾಗಿದೆ.
ಸರ್ಕಾರ ವಿಸರ್ಜಿಸುವ ಮುನ್ಸೂಚನೆಯ ಟ್ವೀಟೊಂದನ್ನು
ಪಕ್ಷದ ಮುಖಂಡರಾದ ಸಂಜಯ್ ರಾವತ್ ಬರೆದಿದ್ದಾರೆ. ಮಹಾರಾಷ್ಟ್ರದ ಈ ರಾಜಕೀಯ ಬಿಕ್ಕಟ್ಟಿಗೆ ಪ್ರಮುಖ ಕಾರಣವೇನೆಂದರೆ, ಶಿವಸೇನೆಯ ನಾಯಕ ಏಕನಾಥ್ ಶಿಂಧೆ ಕಾರಣವೆಂದು ಹೇಳಲಾಗಿದ್ದು, ಅವರು ತಮಗೆ 46 ಶಾಸಕರ ಬೆಂಬಲ ಇರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದಾರೆ. ಇನ್ನೊಂದೆಡೆ ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಏಕನಾಥ್ ಶಿಂಧೆ, ಶಿವಸೇನಾದ 40 ಹಾಗೂ ಪಕ್ಷೇತರ 6 ಒಟ್ಟು 46 ಶಾಸಕರ ಬೆಂಬಲ ಇರುವುದಾಗಿ ಹೇಳಿಕೊಂಡಿದ್ದಾರೆ.
ಬಂಡಾಯ ಎದ್ದಿರುವ ಶಾಸಕರ ಜೊತೆ ಮಂಗಳವಾರ ಸಿಎಂ ಉದ್ಧವ್ ಠಾಕ್ರೆ ಮಾತುಕತೆ ನಡೆಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಂಡಾಯ ಶಮನಕ್ಕೆ ಇಂದು ಸೂರತ್ ಗೆ ಇಬ್ಬರೂ ಪ್ರತಿನಿಧಿಗಳನ್ನು ಮುಖ್ಯಮಂತ್ರಿ ಉದ್ಧವ ಠಾಕ್ರೆ ಕಳಿಸಿದ್ದರು. ಒಂದು ದಿನದ ಕಾಯುವಿಕೆಯ ನಂತರ ಶಿಂದೆಯವರು ಪ್ರತಿನಿಧಿಗಳನ್ನು ಭೇಟಿ ಮಾಡಿ ನಂತರ ಮುಖ್ಯಮಂತ್ರಿಗಳು ದೂರವಾಣಿಯಲ್ಲಿ ಮಾತನಾಡಿದ್ದರು. “ಈ ಸಂದರ್ಭದಲ್ಲಿ ತನಗೆ ಮಂತ್ರಿಯಾಗುವ ಆಸೆ ಇಲ್ಲ. ಆದರೆ ಶಿವಸೇನೆ ಬಿಜೆಪಿಯನ್ನು ಬೆಂಬಲಿಸಬೇಕು. ಶಿವಸೇನೆಯ ಸುಪ್ರಿಮೋ ಲೀಡರ್ ಆಗಿದ್ದ ಬಾಳಾಠಾಕ್ರೆಯವರು ಕಟ್ಟರ್ ಹಿಂದುತ್ವದ ಪ್ರತಿಪಾದಕರಾಗಿದ್ದರು. ಈಗಿನ ಶಿವಸೇನೆ ಹಿಂದುತ್ವದಿಂದ ದೂರ ಸರಿಯುತ್ತಿದೆ. ಬಿಜೆಪಿಗೆ ಬೆಂಬಲಿಸಿ ನಾನು ಬರುತ್ತೇನೆ ” ಎಂದು ಮುಖ್ಯಮಂತ್ರಿಗೆ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದರು ಶಿಂಧೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಕಠಿಣವಾಗಿರುವ ಕಾರಣ ಮಾತುಕತೆಯ ಫಲಪ್ರದವಾಗಿಲ್ಲ. ನಂತರ ಬಂಡಾಯ ಎದ್ದ ಶಾಸಕರು ಗುಜರಾತ್ ನ ಸೂರತ್ ನಿಂದ ಅಸ್ಸಾಂನ ಗೌಹಾಟಿಗೆ ಆಗಮಿಸಿದ್ದರು. ಹೀಗೆ ಮಹಾರಾಷ್ಟ್ರ ಸರ್ಕಾರದಿಂದ ಬಂಡಾಯ ಎದ್ದಿರೋ ಶಾಸಕರಿಗೆ ಅಸ್ಸಾಂನಲ್ಲಿ ಬಿಜೆಪಿ ನಾಯಕರಿಂದ ಸ್ವಾಗತ ಸಿಕ್ಕಿದ್ದು, ಗೌಹಾಟಿಯ ಐಷಾರಾಮಿ ಹೊಟೇಲ್ ಗಳಲ್ಲಿ 50 ಕ್ಕೂ ಹೆಚ್ಚು ಶಾಸಕರಿಗೆ ವಾಸ್ತವ್ಯ ಕಲ್ಪಿಸಲಾಗಿದೆ.
ಉದ್ಧವ್ ಠಾಕ್ರೆ ಶಿಂಧೆ ಜೊತೆ ಮಾತುಕತೆ ನಡೆಸಿದ್ದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಶಿಂಧೆ ಕಾಂಗ್ರೆಸ್ ಮತ್ತು ಎನ್ ಸಿ ಪಿ ಶಿವಸೇನೆ ಮೈತ್ರಿ ಕಡಿದುಕೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಮಹಾರಾಷ್ಟ್ರ ಈಗ ರಾಜಕೀಯ ಪರಿಸ್ಥಿತಿ ಯಾವ ಹಾದಿ ಹಿಡಿಯಲಿದೆ ಎಂದು ಕಾದು ನೋಡಬೇಕಿದೆ.