ರಾಜಿನಾಮೆ ನೀಡುತ್ತಾರಾ ಉದ್ಧವ್ ಠಾಕ್ರೆ ?
ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಶಿವಸೇನೆಯನ್ನು ಹಿಂದುತ್ವದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ತಮ್ಮ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡ ನಂತರ ಮೊದಲ ಬಾರಿಗೆ ಫೇಸ್ ಬುಕ್ ಲೈವ್ ಮೂಲಕ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ತಾವು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.
ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ, ನನ್ನ ರಾಜೀನಾಮೆ ಪತ್ರ ರೆಡಿ ಇದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಪಕ್ಷದ ಶಾಸಕರೇ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದನ್ನು ನೋಡಿ ನನಗೆ ತೀವ್ರ ದುಃಖವಾಗಿದೆ. ನಾನು ಮುಖ್ಯಮಂತ್ರಿ ಹುದ್ದೆ ತೊರೆಯಲು ಸಿದ್ಧನಿದ್ದೇನೆ. ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ. ಶಿವಸೇನೆಯ ಶಾಸಕರಲ್ಲಿ ಒಬ್ಬರು ಮುಖ್ಯಮಂತ್ರಿಯಾಗಿ ಮಾಡಲು ನೀವು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ನೀವು ನನ್ನ ಮುಂದೆ ಬಂದು ರಾಜೀನಾಮೆ ನೀಡಿ ಎಂದು ತಿಳಿಸಿ, ಆ ಕ್ಷಣವೇ ನಾನು ರಾಜೀನಾಮೆ ನೀಡುತ್ತೇನೆ.
ಸಿಎಂ ಹುದ್ದೆಗಳು ಬರುತ್ತವೆ ಮತ್ತು ಹೋಗುತ್ತವೆ ಆದರೆ ನಿಜವಾದ ಆಸ್ತಿ ಜನರ ಪ್ರೀತಿ. ಕಳೆದ ಎರಡು ವರ್ಷಗಳಲ್ಲಿ, ನಾನು ಜನರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುವ ಅದೃಷ್ಟವನ್ನು ಹೊಂದಿದ್ದೇನೆ ಎಂದು ಅವರು ಭಾವನಾತ್ಮಕವಾಗಿ ಹೇಳಿದರು.