ಪಿಎಂ ಕಿಸಾನ್ 12 ನೇ ಕಂತಿನ ಹಣ ರೈತರ ಕೈ ಸೇರುವ ಮುನ್ನವೇ ರೈತರಿಗೆ ಇನ್ನೊಂದು ಸಿಹಿ ಸುದ್ದಿ!!
ಕೇಂದ್ರ ಸರ್ಕಾರವು ರೈತರಿಗೋಸ್ಕರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಿಂದ ಅದೆಷ್ಟೋ ರೈತರಿಗೆ ಅನುಕೂಲವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತಿನ 2000 ರೂ.ಗಳನ್ನು ವರ್ಗಾಯಿಸಿದ ನಂತರ, ಇದೀಗ ರೈತರು 12 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಆದರೆ 12ನೇ ಕಂತಿನ ಹಣ ಉತ್ತರಪ್ರದೇಶದ ರೈತರ ಖಾತೆ ಸೇರುವ ಮುನ್ನವೇ ಮತ್ತೊಂದು ಸಿಹಿ ಸುದ್ದಿ ರೈತರಿಗೆ ಸಿಗಲಿದೆ.
ಉತ್ತರ ಪ್ರದೇಶದ ಯೋಗಿ ಸರ್ಕಾರ ‘ಕೃಷಿ ಸಾಲ ಮನ್ನಾ ಯೋಜನೆ’ಯನ್ನು ಪುನರಾರಂಭಿಸಲು ಸಿದ್ಧತೆ ನಡೆಸಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಆ ಯೋಜನೆಯನ್ನು ಪುನರಾರಂಭಿಸಲು ಸರ್ಕಾರ ಯೋಚಿಸುತ್ತಿದೆ.
2019 ರಲ್ಲಿಯೇ ಈ ಯೋಜನೆಯನ್ನು ಉತ್ತರಪ್ರದೇಶ ಸರ್ಕಾರ ನಿಲ್ಲಿಸಿತ್ತು. ಸರ್ಕಾರ ಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ಸಾಧ್ಯವಾಗದ ರೈತರು ಸರ್ಕಾರದ ಕ್ರಮ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದಾದ ನಂತರ ಈ ರೈತರಿಗೆ ಯೋಜನೆಯ ಲಾಭವನ್ನು ಕೊಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ದುರ್ಗಾಶಂಕರ ಮಿಶ್ರಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ ಹಣ ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲಾಯಿತು. ಇದೀಗ ಯೋಜನೆಯ ಲಾಭ ಪಡೆಯದ ರೈತರಿಗೆ ಸೆಪ್ಟೆಂಬರ್-ಅಕ್ಟೋಬರ್ ಒಳಗೆ ಹಣ ನೀಡುವಂತೆ ಕ್ರಮಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ಇನ್ನುಳಿದ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು. ನ್ಯಾಯಾಲಯದಲ್ಲಿ ಅರ್ಜಿಗಳು ಬಾಕಿ ಇರುವ ಅರ್ಹ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಲಿದೆ ಎಂದು ಈಗಾಗಲೇ ಹೈಕೋರ್ಟ್ಗೆ ತಿಳಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಮುಂದಿನ ತಿಂಗಳುಗಳಲ್ಲಿ ಪೂರಕ ಬಜೆಟ್ ನಂತರ ಉಳಿದ ರೈತರ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು.
2017ರ ಮಾರ್ಚ್ನಲ್ಲಿ ಮೊದಲ ಬಾರಿಗೆ ಯುಪಿ ಅಧಿಕಾರಕ್ಕೆ ಬಂದ ನಂತರ ಸಿಎಂ ಯೋಗಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಸಣ್ಣ ಮತ್ತು ಅತಿ ಸಣ್ಣ ರೈತರು 2016ರ ಮಾರ್ಚ್ 31 ಅಥವಾ ಅದಕ್ಕೂ ಮೊದಲು ಪಡೆದಿರುವ 1 ಲಕ್ಷ ರೂ.ವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಹೇಳಲಾಗಿದೆ.