ರಾಷ್ಟ್ರಪತಿ ಚುನಾವಣೆಗೆ ಬಲಿಷ್ಠ ಅಭ್ಯರ್ಥಿಯನ್ನು ತಂದು ನಿಲ್ಲಿಸಿದ ವಿರೋಧಪಕ್ಷಗಳ ಒಕ್ಕೂಟ !
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮೊಮ್ಮಗ ಸೇರಿದಂತೆ ಹಲವು ನಾಯಕರುಗಳು ರಾಷ್ಟ್ರಪತಿ ಹುದ್ದೆಯ ಸ್ಥಾನಕ್ಕೆ ಸ್ಪರ್ಧಿಸುವುದರಿಂದ ಹಿಂದೆ ಸರಿದಿದ್ದರು. ಈಗ ಅಳೆದು ಸುರಿದು ವಿರೋಧಪಕ್ಷಗಳು ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಯಶವಂತ್ ಸಿನ್ಹಾ ಅವರು ಬಿಜೆಪಿಯ ಹಳೆಯ ಹುಲಿ. ಜೀವನಪೂರ್ತಿ ಬಿಜೆಪಿಯಲ್ಲಿದ್ದುಕೊಂಡು ಕೊನೆಕ್ಷಣದಲ್ಲಿ ನರೇಂದ್ರ ಮೋದಿಯವರ ನಾಯಕತ್ವದ ಮೇಲೆ ಮುನಿಸಿಕೊಂಡು ಅಲ್ಲಿಂದ ಹೊರಬಿದ್ದವರು ಸಿನ್ಹಾ. ಈಗಲೂ ಯಶವಂತ ಸಿನ್ಹಾ ಅವರ ಪುತ್ರ ಬಿಜೆಪಿಯ ಕೇಂದ್ರದ ಮಂತ್ರಿಯಾಗಿದ್ದಾರೆ. ಅಂತಹ ಯಶವಂತ ಸಿನ್ಹಾ ವಿರೋಧಪಕ್ಷಗಳ ಅಭ್ಯರ್ಥಿಯಾಗಿರುವುದು ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ. ಬಿಜೆಪಿ ಯಶವಂತ ಸಿನ್ಹಾ ಅವರನ್ನು ಬೆಂಬಲಿಸುತ್ತದೆಯೋ ಅಥವಾ ಮತ್ತಷ್ಟು ಬಲಿಷ್ಠ ಅಭ್ಯರ್ಥಿಯನ್ನು ಅವರ ಎದುರು ತಂದು ನಿಲ್ಲಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.
ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧಪಕ್ಷಗಳ ಒಮ್ಮತದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕಗ್ಗಂಟು ಬಗೆಹರಿದಿದೆ. ಇದುವರೆಗೂ ಮೂವರ ಹೆಸರನ್ನು ಸೂಚಿಸಲಾಗಿದ್ದು, ಮೂವರೂ ನಾಯಕರು ಹಿಂದೆ ಸರಿದಿದ್ದಾರೆ. ಇದರಿಂದ ಕಂಗೆಟ್ಟಿರುವ ವಿರೋಧಪಕ್ಷಗಳ ಗುಂಪಿಗೆ ಮಂಗಳವಾರ ಹೊಸ ಆಸರೆ ದೊರಕಿದೆ.
ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಹೆಸರನ್ನು ರಾಷ್ಟ್ರಪತಿ ಸ್ಥಾನಕ್ಕೆ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಇದೀಗ ಅಧಿಕೃತವಾಗಿ ಮಾಡಲಾಗಿದೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಸರೆನ್ಸ್ (ಎನ್ಸಿ) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಮಹಾತ್ಮಾ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಸೇರಿದಂತೆ ಮೂವರು ಸಂಭಾವ್ಯರ ಹೆಸರು ಕೇಳಿ ಬಂದಿತ್ತು.
ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಟಿಎಂಸಿಯಲ್ಲಿ ಮಮತಾ ಜೀ ಅವರು ನನಗೆ ನೀಡಿದ ಗೌರವ ಮತ್ತು ಪ್ರತಿಷ್ಠೆಗೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ವಿರೋಧ ಪಕ್ಷಗಳ ಏಕತೆಗಾಗಿ ಕೆಲಸ ಮಾಡಲು ಈಗ ಒಂದು ದೊಡ್ಡ ರಾಷ್ಟ್ರೀಯ ಉದ್ದೇಶಕ್ಕಾಗಿ ನಾನು ಪಕ್ಷದಿಂದ ದೂರ ಸರಿಯಬೇಕಾದ ಸಮಯ ಬಂದಿದೆ. ಅವರು ಈ ಹೆಜ್ಜೆಯನ್ನು ಅನುಮೋದಿಸುತ್ತಾರೆ ಎಂದು ನನಗೆ ಖಾತ್ರಿಯಿದೆ “ಎಂದು 84ರ ಹರೆಯದ ಸಿನ್ಹಾ ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಅಂತಿಮವಾಗಿ ಇದೀಗ ವಿರೋಧ ಪಕ್ಷದ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.
ಏತನ್ಮಧ್ಯೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು ತನ್ನ ಸಂಸದೀಯ ಮಂಡಳಿ ಸಭೆಯನ್ನು ನಡೆಸಲಿದ್ದು ಅಲ್ಲಿ ಅದು ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.