ಅಂತರಾಷ್ಟ್ರೀಯ ಯೋಗ ದಿನದ ಮಹತ್ವ, ಆಚರಣೆ, ಈ ವರ್ಷದ ಥೀಮ್ ಏನು ಗೊತ್ತಾ ?
ಮನುಷ್ಯನ ದೇಹ ಮತ್ತು ಆರೋಗ್ಯಕ್ಕೆ ಯೋಗ ಅವಶ್ಯಕ ಎನ್ನುವ ಮಾತನ್ನು ಎಲ್ಲರೂ ಒಪ್ಕೋತ್ತಾರೆ. ಯೋಗ ಮಾಡುವುದರಿಂದ ಆಗುವ ಪ್ರಯೋಜನ ತುಂಬಾ. ಮನಸ್ಸು ಉಲ್ಲಾಸದಿಂದಿರಲು ಯೋಗ ಅತ್ಯವಶ್ಯಕವಾಗಿದೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆ. ಯೋಗದಿಂದ ಧ್ಯಾನ ಮತ್ತು ವಿಶ್ರಾಂತಿ ದೊರೆಯುವುದರಿಂದ ನಮಗೆ ಬಹಳನೇ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಯೋಗವು ನಮ್ಮ ದೇಹದ ಮೇಲೆ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ. ನಮ್ಮ ಒತ್ತಡ ಮತ್ತು ಆತಂಕವನ್ನು ದೂರ ಮಾಡುತ್ತದೆ.
ಜೂನ್ 21 ಅನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆಯು ಘೋಷಿಸಿದೆ. ಯೋಗವು ಭಾರತೀಯ ಮೂಲದ 6000 ವರ್ಷ ಹಳೆಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ 21 ರಂದು ವಿಶ್ವ ಯೋಗ ದಿನ ಆಚರಿಸುವಂತೆ ಕರೆ ನೀಡಿದರು.
ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾದ್ದರಿಂದ ಜೂನ್ 21 ರ ದಿನಾಂಕವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ.
ದಕ್ಷಿಣಯಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ. ಬೇಸಿಗೆ ಅಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ.
2014 ರ ಡಿಸೆಂಬರ್ 11 ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನ ಅಥವಾ ವಿಶ್ವ ಯೋಗ ದಿನವಾಗಿ ಘೋಷಿಸಲಾಯಿತು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. 2015ರ ಜೂನ್ 21ನೇ ತಾರೀಖಿನಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸಲಾಯಿತು.
ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಿಸಲಾಗುವುದು. ವಿಶ್ವ ಯೋಗ ದಿನವನ್ನು ಪ್ರತಿವರ್ಷ ವಿಶಿಷ್ಟ ವಿಷಯದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. 2022ರಲ್ಲಿ ಆಚರಿಸಲಾಗುವ ಅಂತರಾಷ್ಟ್ರೀಯ ಯೋಗ ದಿನದ 8ನೇ ಆವೃತ್ತಿಯ ಥೀಮ್ ಏನೆಂದರೆ, “ಮಾನವೀಯತೆಗಾಗಿ ಯೋಗ” ಎಂಬ ವಿಷಯದ ಮೇಲೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ.