ಪಡುಬಿದ್ರಿ : ಉಚ್ಚಿಲ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು, ಹಲವು ವಸ್ತುಗಳ ಕಳ್ಳತನ
ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಸ್ತುಗಳ ಕಳವು ನಡೆದಿರುವ ಘಟನೆಯೊಂದು ಶನಿವಾರ ರಾತ್ರಿ ನಡೆದಿದೆ. ದೇವಸ್ಥಾನದ ಕಾಣಿಕೆ ಡಬ್ಬದಿಂದ 15,000 ರೂ. ಹಾಗೂ 500 ರೂ. ಬೆಲೆಬಾಳುವ ಬೆಳ್ಳಿಯ 2 ತಟ್ಟೆಗಳನ್ನು ಕಳವು ಮಾಡಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಧ್ವಜಸ್ತಂಭದ ಮೇಲೇರಿ ಕಳ್ಳರು ದೇಗುಲದ ಒಳಗೆ ಪ್ರವೇಶ ಮಾಡಿದ್ದು, ಹೊರ ಹೋಗುವಾಗ ಪಶ್ಚಿಮದ ಮುಖ್ಯದ್ವಾರ ಮೂಲಕ ಹೋಗಿದ್ದಾರೆ. ಶ್ರೀ ಗಣಪತಿ ದೇವರ ಗುಡಿಯ ಒಳಗೆ ಪ್ರವೇಶಿಸಿದ ಕಳ್ಳರು ಗಣಪತಿಯ ಶಿಲಾಮೂರ್ತಿಯ ಮುಖವಾಡಕ್ಕೆ ಇಡಲಾದ ಪಂಚಲೋಹದ ತಗಡು ಹಾಗೂ ಪಾಣಿಪೀಠದ ಕವಚಗಳನ್ನು ತೆಗೆದು ಅಲ್ಲೇ ಬಿಟ್ಟು ಹೋಗಿದ್ದಾರೆ.
ದ್ವಾರದಲ್ಲಿದ್ದ ಎರಡು ಲಾಕರ್ ಕಾಣಿಕೆ ಡಬ್ಬಿಯನ್ನು ಒಡೆಯಲು ಕಳ್ಳರು ಯತ್ನಿಸಿದ್ದಾರೆ. ದೇಗುಲದ ಕಚೇರಿಯ ಬೀರುವನ್ನು ಕೂಡಾ ಖದೀಮರು ಮುರಿದು ಜಾಲಾಡಿದ್ದಾರೆ. ನಂತರ ಎರಡು ಬೆಳ್ಳಿಯ ತಟ್ಟೆಗಳನ್ನು ಕಳವು ಮಾಡಿದ್ದಾರೆ.
ದೇಗುಲದ ಸಹ ಅರ್ಚಕ ರಾಜಾರಾಮ್ ಭಟ್ ಅವರು ಬೆಳಗ್ಗೆ ದೇಗುಲಕ್ಕೆ ಬಂದಾಗ ಬಾಗಿಲು ತೆರೆದಿದ್ದು, ಕಳ್ಳತನವಾದ ಕುರಿತು ಆಡಳಿತ ಮಂಡಳಿಯವರಿಗೆ ಮಾಹಿತಿ ನೀಡಿದ್ದಾರೆ. ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.