ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ ಈ ಎಲೆಕ್ಟ್ರಿಕ್ ಸ್ಕೂಟರ್ !!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಕಳೆದ ಕೆಲ ತಿಂಗಳಿನಿಂದ ವೇಗವಾಗಿ ಹೆಚ್ಚುತ್ತಿದೆ. ಅನೇಕ ಸ್ಟಾರ್ಟ್ಅಪ್ ಕಂಪನಿಗಳು ತಮ್ಮ ಹೊಸ ಇವಿ ಮಾದರಿಗಳೊಂದಿಗೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಪ್ರವೇಶಿಸುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸದ್ಯ ಇವಿ ಸ್ಕೂಟರ್ ಮಾರಾಟವು ಅಗ್ರಸ್ಥಾನದಲ್ಲಿದ್ದು, ಕಳೆದ ಎರಡು ವರ್ಷಗಳಲ್ಲಿ ಹಲವಾರು ಸ್ಟಾರ್ಟ್ಅಪ್ ಕಂಪನಿಯು ಇವಿ ಸ್ಕೂಟರ್ಗಳನ್ನು ಬಿಡುಗಡೆ ಮಾಡಿವೆ. ಇದೀಗ ಬ್ಯಾಟ್ರೇ ಕಂಪನಿಯು ಕೂಡಾ ತನ್ನ ಹೊಸ ಸ್ಟೋರಿ ಇವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಸ್ಟೋರಿ ಇವಿ ಮಾದರಿಯು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
ಬ್ಯಾಟ್ರೇ ಕಂಪನಿಯು ಈಗಾಗಲೇ ಮಾರುಕಟ್ಟೆಯಲ್ಲಿ ಬ್ಯಾಟ್ರೇ ಒನ್, ಬ್ಯಾಟ್ರೇ ಲೊ, ಬ್ಯಾಟ್ರೇ ಲೊ ಟಿ ಮತ್ತು ಬ್ಯಾಟ್ರೇ ಜಿಪಿಎಸ್ ಇವಿ ಸ್ಕೂಟರ್ ಸೇರಿದಂತೆ ನ್ಯೂಟ್ರಾನ್, ಮಾಂಟ್ರಾ, ಕ್ರಾಸ್ ಮತ್ತು ಹ್ಯೂಜ್ನಂತಹ ವ್ಯಾಪಕ ಶ್ರೇಣಿಯ ಇ-ಸೈಕಲ್ ಮಾದರಿಗಳನ್ನು ಸಹ ಮಾರಾಟ ಮಾಡುತ್ತಿದ್ದು, ಇದೀಗ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ರೆಟ್ರೋ ಡಿಸೈನ್ ಪ್ರೇರಿತ ಸ್ಟೋರಿ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದೆ.
ಹೊಸ ಸ್ಟೋರಿ ಇವಿ ಸ್ಕೂಟರ್ ಮಾದರಿಯು 3.1kWh ಬ್ಯಾಟರಿ ಪ್ಯಾಕ್ನೊಂದಿಗೆ ಬಿಡುಗಡೆಗೊಂಡಿದ್ದು, ಎಕ್ಸ್ಶೋರೂಂ ಪ್ರಕಾರ ರೂ. 89,600 ಬೆಲೆ ಹೊಂದಿರುವ ಹೊಸ ಇವಿ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್ಗೆ 132 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಬ್ಯಾಟ್ರೇ ಸ್ಟೋರಿ ಇವಿ ಸ್ಕೂಟರ್ನಲ್ಲಿ ಬ್ಯಾಟರಿ ಪ್ಯಾಕ್ IP65 ಪ್ರಮಾಣೀಕೃತವಾಗಿದ್ದು, ಹೊಸ ಇವಿ ಸ್ಕೂಟರ್ ಮಾದರಿಗಾಗಿ ಬ್ಯಾಟ್ರೇ ಕಂಪನಿಯು ಟಿವಿಎಸ್ ಕಂಪನಿ ನಿರ್ಮಾಣದ ಹಬ್ ಮೋಟಾರ್ ಎರವಲು ಪಡೆದುಕೊಂಡಿದೆ. ಇದು 2.86 ಬಿಎಚ್ಪಿ ಮತ್ತು 20 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಇದು ಪ್ರತಿ ಗಂಟೆ ಗರಿಷ್ಠ 65 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.
ಹಬ್ ಮೋಟಾರ್ ಸುರಕ್ಷತೆಗಾಗಿ ಕಂಪನಿಯು ಧೂಳು ಮತ್ತು ತುಕ್ಕು ನಿರೋಧಕ ತಂತ್ರಜ್ಞಾನಕ್ಕಾಗಿ IP67 ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಕಂಪನಿಯು ಒಟ್ಟು ಒಂದು ಲಕ್ಷ ಕಿ.ಮೀ ಟೆಸ್ಟಿಂಗ್ ನಂತರವೇ ಹೊಸ ಮಾದರಿಯನ್ನು ರಸ್ತೆಗಿಳಿಸಿದೆ.
ಹೊಸ ಬ್ಯಾಟ್ರೇ ಸ್ಟೋರಿ ಇವಿ ಸ್ಕೂಟರ್ ಮಾದರಿಯ ರೆಟ್ರೋ ವಿನ್ಯಾಸದೊಂದಿಗೆ ಆಧುನಿಕ ವಾಹನಗಳ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಎಲ್ಇಡಿ ರೌಂಡ್ ಹೆಡ್ಲ್ಯಾಂಪ್, ಎಲ್ಇಡಿ ಟೈಲ್ಲೈಟ್, ಮೆಟಲ್ ಬಾಡಿ, ಹೆಚ್ಚಿನ ಸ್ಥಳಾವಕಾಶ ಹೊಂದಿರುವ ಫುಟ್ಬೋರ್ಡ್ ಸೌಲಭ್ಯವು ಆರಾಮದಾಯಕ ಸ್ಕೂಟರ್ ಚಾಲನೆಗೆ ಸಹಕಾರಿಯಾಗಲಿವೆ.
ಇದಲ್ಲದೇ ಹೊಸ ಇವಿ ಸ್ಕೂಟರ್ ಚಾಲನೆಗೆ ಮತ್ತಷ್ಟು ಥ್ರಿಲ್ ನೀಡಲು ಕಂಪನಿಯು ಇಕೋ, ಕಂಫರ್ಟ್ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್ಗಳನ್ನು ನೀಡಿದ್ದು, ಇದರ ಜೊತೆಗೆ ಪಾರ್ಕಿಂಗ್ ಮತ್ತು ರಿವರ್ಸ್ ಮೋಡ್ ಸಹ ಹೊಸ ಸ್ಕೂಟರ್ಗೆ ಪ್ರೀಮಿಯಂ ಮೌಲ್ಯವನ್ನು ಹೆಚ್ಚಿಸಿವೆ.
ಇದರ ಜೊತೆಗೆ ಕಂಪನಿಯು ಇವಿ ವಾಹನ ಖರೀದಿಗೆ ಸರಳವಾದ ಸಾಲಸೌಲಭ್ಯಗಳನ್ನು ಸಹ ಪರಿಚಯಿಸಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಜೆಸ್ಟ್ಮನಿ ಸಹಭಾಗಿತ್ವದಲ್ಲಿ ಬ್ಯಾಟ್ರೇ ಎಲೆಕ್ಟ್ರಿಕ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಸುಲಭ ಕಂತುಗಳಲ್ಲಿ ಖರೀದಿಸಬಹುದಾದ ಸಾಲ ಸೌಲಭ್ಯ ನೀಡುತ್ತಿದೆ. ಕ್ರೆಡಿಟ್ ಸ್ಕೋರ್ ಹೊಂದಿರದ ಗ್ರಾಹಕರು ಸಹ ಈ ಹಣಕಾಸು ಯೋಜನೆಯಡಿ ಬ್ಯಾಟ್ರೇ ಸ್ಕೂಟರ್ಗಳನ್ನು ಖರೀದಿಸಬಹುದಾಗಿದ್ದು, ಬ್ಯಾಟ್ರೇ ನಿರ್ಮಾಣದ ಎಲ್ಲಾ ಇವಿ ಸ್ಕೂಟರ್ಗಳ ಖರೀದಿಗೂ ಈ ಸಾಲಸೌಲಭ್ಯಗಳನ್ನು ಲಭ್ಯವಿವೆ.
ಜೆಸ್ಟ್ಮನಿಯ ಆನ್ಲೈನ್ ಹಣಕಾಸು ಯೋಜನೆಯಡಿಯಲ್ಲಿ ಗ್ರಾಹಕರಿಗೆ ಹಲವಾರು ಅನುಕೂಲಗಳಿವೆ. ಗ್ರಾಹಕರು ಕೆವೈಸಿಗಾಗಿ ಶೋರೂಂಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಕೆವೈಸಿಯ ಸಂಪೂರ್ಣ ಪ್ರಕ್ರಿಯೆ ಆನ್ಲೈನ್ನಲ್ಲಿ ನಡೆಯಲಿದ್ದು, ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿರದ ಗ್ರಾಹಕರು ಸಹ ಸ್ಕೂಟರ್ಗಳಿಗೆ ಹಣಕಾಸು ಸೌಲಭ್ಯವನ್ನು ಪಡೆಯಬಹುದಾಗಿದ್ದು, ಸ್ಕೂಟರ್ ಖರೀದಿಗಾಗಿ 3, 6 ಹಾಗೂ 12 ತಿಂಗಳ ಇಎಂಐ ಆಯ್ಕೆಯನ್ನು ನೀಡಲಾಗುತ್ತದೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ವಿವಿಧ ಮಾದರಿಯ ಇವಿ ಸ್ಕೂಟರ್ ಬಿಡುಗಡೆಯೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ಬ್ಯಾಟ್ರೇ ಕಂಪನಿಯು ಇದೀಗ ಸ್ಟೋರಿ ರೆಟ್ರೋ ವಿನ್ಯಾಸ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ ಮಾಡಿದೆ. ಇದು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್ಗಳೊಂದಿಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಸ್ಕೂಟರ್ ಮೈಲೇಜ್ ಮತ್ತು ಮೆಟಲ್ ಬಾಡಿ ವೈಶಿಷ್ಟ್ಯತೆಯು ಹೊಸ ಇವಿ ಸ್ಕೂಟರ್ ಆಯ್ಕೆ ಮೌಲ್ಯ ಹೆಚ್ಚಿಸಲಿದೆ.