ನಟಿ ಸಾಯಿಪಲ್ಲವಿಯಿಂದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತು ವಿವಾದಾತ್ಮಕ ಹೇಳಿಕೆ: ವ್ಯಾಪಕ ಟೀಕೆ
“ವಿರಾಟಪರ್ವಂ” ಸಿನಿಮಾ ಸಂದರ್ಶನವೊಂದರಲ್ಲಿ ನಟಿ ಸಾಯಿ ಪಲ್ಲವಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಗೋ ಹತ್ಯೆಗೆ ಸಂಬಂಧ ಕಲ್ಪಿಸಿ ಮಾತನಾಡಿರುವ ವೀಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕೋಪಕ್ಕೆ ಗುರಿಯಾಗಿದ್ದಾರೆ.
ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ
ಹಿಂಸಾಚಾರವನ್ನು ನಟಿ ಸಾಯಿ ಪಲ್ಲವಿ ಖಂಡಿಸಿದ್ದಾರೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಇತ್ತೀಚಿಗೆ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲಾದ ಹಲ್ಲೆಯನ್ನು ಹೋಲಿಸಿ ಯಾರನ್ನೂ ಧರ್ಮದ ಹೆಸರಲ್ಲಿ ಹಿಂಸಿಸಬಾರದು ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಸಾಯಿಪಲ್ಲವಿ ಅವರು ‘ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ತೋರಿಸಿದ್ದಾರೆ. ನೀವು ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ಪರಿಗಣಿಸುತ್ತಿದ್ದರೆ, ಹಾಗಾದರೆ ಇತ್ತೀಚೆಗೆ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಹಾಗಾದರೆ ಈ ಎರಡು ಘಟನೆಗಳ ನಡುವಿನ ವ್ಯತ್ಯಾಸ ಎಲ್ಲಿದೆ’ ಎಂದು ಹೇಳಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಸತ್ತ ಹಸುವನ್ನು ಎತ್ತಿನಗಾಡಿಯಲ್ಲಿ ಸಾಗಿಸಲಾಗುತ್ತಿತ್ತು ಒಬ್ಬ ಮುಸ್ಲಿಂ ವ್ಯಕ್ತಿ ಆ ಗಾಡಿಯನ್ನು ಓಡಿಸುತ್ತಿದ್ದ. ಆಗ ಅಲ್ಲಿಗೆ ಬಂದ ಕೆಲವರು ಆತನಿಗೆ ಹೊಡೆದು ಜೈ ಶ್ರೀರಾಮ್ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಪಂಡಿತರ ಹತ್ಯೆಗೂ, ವ್ಯಕ್ತಿಯ ಮೇಲಿನ ಹಲ್ಲೆಗೂ ವ್ಯತ್ಯಾಸ ಎಲ್ಲಿದೆ’ ಅವರೂ ಹಿಂಸೆ ಮಾಡಿದ್ದಾರೆ, ಇವರೂ ಕೂಡ ಅದೇ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದರು.
ನಟಿ ಸಾಯಿ ಪಲ್ಲವಿಯ ಮಾತಿಗೆ ಪರ ವಿರೋಧ ವ್ಯಕ್ತವಾಗಿದೆ. ಕೆಲವು ಟ್ವಿಟರ್ ಬಳಕೆದಾರರು ಆಕೆಯ ಧೈರ್ಯವನ್ನು ಶ್ಲಾಘಿಸಿದರೆ, ಇತರರು ಅವರನ್ನು ಟ್ರೋಲ್ ಮಾಡಿದ್ದಾರೆ.