ಮಂಗಳೂರು : ಅಡಿಕೆ ಬೆಳೆಗಾರರೇ ಮಹತ್ವದ ಮಾಹಿತಿ : ಅಡಿಕೆ ಎಲೆ ಹಳದಿ ರೋಗದ ತೋಟಗಳಲ್ಲಿ ಪರ್ಯಾಯ ಬೆಳೆ ಬೆಳೆಯುವ ಪುನಶ್ಚೇತನ – ತೋಟಗಾರಿಕೆ ಇಲಾಖೆ
ಮಂಗಳೂರು: ಹಳದಿ ಎಲೆ ರೋಗ ಬಾಧಿತ ಅಡಿಕೆ ತೋಟಗಳನ್ನು ಹಂತಹಂತವಾಗಿ ಇತರ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಪುನಶ್ಚೇತನಗೊಳಿಸುವ ಯೋಜನೆಯ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ.
ಮೊದಲ ಹಂತದಲ್ಲಿ ಸರಕಾರದಿಂದ 3.25 ಕೋಟಿ ರೂ. ಮಂಜೂರಾಗಿದೆ. ಸುಳ್ಯ, ಪುತ್ತೂರು ತಾಲೂಕುಗಳ ಅಡಿಕೆ ಬೆಳೆಗಾರರಿಂದ ಅರ್ಜಿ ಸ್ವೀಕರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.
ಅಡಿಕೆ ತೋಟಗಳಲ್ಲಿ ಎಲೆ ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಕೃಶವಾಗುವ ಮರಗಳು ಬಳಿಕ ಸಾವನ್ನಪ್ಪುತ್ತವೆ. ಇದರಿಂದ ಸಾವಿರಾರು ರೈತರು ತೊಂದರೆಗೀಡಾಗಿದ್ದಾರೆ. ಒಂದೆಡೆ ಕ್ಯಾಂಪ್ಕೋ ಈ ಕುರಿತು ಸಂಶೋಧನೆಗೆ ಮುಂದಾಗಿದ್ದರೆ, ಇನ್ನೊಂದೆಡೆ ತೋಟಗಾರಿಕೆ ಇಲಾಖೆಯವರೂ ಪ್ರಾಥಮಿಕ ಸಮೀಕ್ಷೆ ನಡೆಸಿದ್ದು, ಪ್ಯಾಕೇಜ್ ನೆರವಿನೊಂದಿಗೆ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನ ಸಂಸ್ಥೆ (ಸಿಪಿಸಿಆರ್‌ಐ)ಗೆ ಈ ಕುರಿತು ಸಂಶೋಧನೆ ನಡೆಸಲು ಕೇಳಿಕೊಂಡಿದ್ದಾರೆ.
ಯಾವ ಬೆಳೆ ಎನ್ನುವುದನ್ನು ನಾವು ರೈತರಿಗೆ ಸೂಚಿಸಿಲ್ಲ. ಅವರ ಪರಿಸ್ಥಿತಿಗೆ ಅನುಗುಣವಾಗಿ ಅವರೇ ಸೂಕ್ತವೆನಿಸುವ ತೋಟಗಾರಿಕೆ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ತಾಳೆ, ಬಾಳೆ, ರಂಬುಟಾನ್, ಮ್ಯಾಂಗೊಸ್ಟೀನ್‌ನಂತಹ ಬೆಳೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಳದಿ ರೋಗ ಪ್ಯಾಕೇಜ್‌ಗೆ ಮುನ್ನ ತೋಟ ಗಾರಿಕೆ ಇಲಾಖೆಯವರು ರೋಗ ಬಾಧಿತ ಪ್ರದೇಶ ಗಳಲ್ಲಿ ಸಮೀಕ್ಷೆ ಕೈಗೊಂಡಿದ್ದರು. ಎರಡು ವರ್ಷಗಳ ಹಿಂದೆ ನಡೆದ ಸಮೀಕ್ಷೆಯಲ್ಲಿ 1217.38 ಹೆಕ್ಟೇರ್ ಪ್ರದೇಶ ಎಲೆಹಳದಿ ರೋಗಕ್ಕೆ ತುತ್ತಾ ಗಿರುವುದನ್ನು ಗುರುತು ಮಾಡಲಾಗಿತ್ತು. ಇದರಿಂದ ಒಟ್ಟು 5,588 ಅಡಿಕೆ ಬೆಳೆಗಾರರು ತೊಂದರೆಗೀಡಾಗಿದ್ದಾರೆ ಎಂದು ವರದಿ ಸಲ್ಲಿಸಿತ್ತು.
ಅಡಿಕೆ ಮರ ಕಡಿದು ಬೇರೆ ನೆಡುವಂತಿಲ್ಲ. ಹಳದಿ ರೋಗ ಬಾಧಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆ ಬೆಳೆಯುವವರು ಅಂತರ ಬೆಳೆಯಾಗಿ ಮೊದಲು ಯಾವುದೇ ಬೆಳೆ ಹಾಕಬಹುದು. ಆದರೆ ಅಡಿಕೆ ಮರಗಳನ್ನು ಕಡಿದು ಬೇರೆ ನೆಡುವ ಹಾಗಿಲ್ಲ. ಅಡಿಕೆ ಮರಗಳಿಗೆ ಹಳದಿ ರೋಗ ತಗಲಿ ಅವು 5 ವರ್ಷಗಳಲ್ಲಿ ಸಾಯುತ್ತಿದ್ದು, ಆ ವೇಳೆಗೆ ಪರ್ಯಾಯ ಬೆಳೆ ಸಿದ್ಧವಾಗುವ ರೀತಿಯಲ್ಲಿ ನೋಡಿಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರ್ಯಾಯ ಬೆಳೆಗಾಗಿ ರೈತರಿಂದ ಅರ್ಜಿಯನ್ನು 20 ದಿನಗಳದ ಸ್ವೀಕರಿಸಲಾಗುತ್ತಿದೆ. ಸ್ಪಂದನೆ ಯಾವ ರೀತಿ ಇದೆ ನೋಡಿಕೊಂಡು ಮುಂದಿನ ಹಂತದ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಮಾಡಲಾಗಿದೆ.