ಶೀಘ್ರದಲ್ಲೇ ‘ರಾತ್ರಿ ಶಾಲೆ’ ಯೋಜನೆ ಆರಂಭ!!
ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಹಿಂದುಳಿದ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿ ‘ರಾತ್ರಿ ಶಾಲೆ’ ಆರಂಭಿಸುವ ಚಿಂತನೆಯನ್ನು ನಡೆಸಿದೆ.
ಸ್ಲಂಗಳಲ್ಲಿ ವಾಸಿಸುತ್ತಿರುವ ಹಿಂದುಳಿದ ಬಡ ಮಕ್ಕಳು ಶಾಲೆಯಿಂದ ಸಂಜೆ ಮನೆಗೆ ತೆರಳಿದ ನಂತರ ಕಲಿಯಲು ಸೂಕ್ತ ಸೌಕರ್ಯ, ಅವಕಾಶಗಳು ಇರುವುದಿಲ್ಲ. ಬೆಂಗಳೂರಿನಲ್ಲಿ ಇಂಥದ್ದೊಂದು ರಾತ್ರಿಶಾಲೆ ಕಾರ್ಯಕ್ರಮ ಆರಂಭಿಸಿದರೆ ಸ್ಲಂ ಮಕ್ಕಳಿಗೆ ಶಾಲಾ ನಂತರದ ಸಮಯದಲ್ಲೂ ಕಲಿಯಲು ಅನುಕೂಲವಾಗಲಿದೆ ಎಂಬುದು ಯೋಚನೆಯಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ವಿದ್ಯಾರ್ಥಿ ಬೆಳಕು ಯೋಜನೆಯಡಿಯಲ್ಲಿ 2016-2019ರವರೆಗೆ ರಾತ್ರಿಶಾಲೆ ಆರಂಭಿಸಲಾಗಿತ್ತು. ಸಂಜೆ 6ರಿಂದ ರಾತ್ರಿ8 ಗಂಟೆವರೆಗೆ ತರಗತಿಗಳು ನಡೆದಿದ್ದು, ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ರಾಮ್ ಪ್ರಶಾಂತ್ ಮನೋಹರ್ ಅವರ ಪರಿಕಲ್ಪನೆಯ ರಾತ್ರಿಶಾಲೆ ಯಶಸ್ವಿಯಾಗಿದೆ. ಇದರಿಂದ ಉತ್ತೇಜಿತವಾಗಿರುವ ಬಿಬಿಎಂಪಿ ನಗರದಲ್ಲೂ ರಾತ್ರಿ ಶಾಲೆ ಆರಂಭಿಸಲು ಯೋಜನೆ ರೂಪಿಸುತ್ತಿದೆ.
ಈ ಕುರಿತು ಅಧಿಕಾರಿಗಳ ಜತೆ ಚರ್ಚಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ನಗರಾದ್ಯಂತ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 165 ಸರ್ಕಾರಿ ಶಾಲೆಗಳಿವೆ. ಅಲ್ಲಿಗೆ ಬರುವ ಮಕ್ಕಳಲ್ಲಿ ಅನೇಕ ವಿದ್ಯಾರ್ಥಿಗಳು ಸ್ಲಂ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಆ ಎಲ್ಲ ಮಕ್ಕಳ ಕಲಿಕೆಗೆ ಸರ್ಕಾರ ವಿಶೇಷ ಕಾಳಜಿ ವಹಿಸಲಿದೆ. ಈ ಸಂಬಂಧ ಪಾಲಿಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದಲ್ಲಿ ನಗರದಲ್ಲಿ ರಾತ್ರಿ ಶಾಲೆ ಯೋಜನೆ ಅಳವಡಿಸಿಕೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿಗಾರರ ಸಂಪರ್ಕಕ್ಕೆ ಸಿಕ್ಕ ವಿ.ರಾಮ್ ಪ್ರಶಾಂತ್ ಮನೋಹರ್ ಅವರು, ರಾತ್ರಿಶಾಲೆಯ ತರಗತಿ ನಡೆಸುವ ಶಿಕ್ಷಕರಿಗೆ ಮಕ್ಕಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ತರಬೇತಿ ನೀಡುವುದು ಅವಶ್ಯಕವಾಗಿರುತ್ತದೆ. ಇದರಿಂದ ಅವರು ಶಾಲಾ ನಂತರದ ಸಮಯದಲ್ಲಿ ಸಂಜೆಯಿಂದ ರಾತ್ರಿವರೆಗೆ ಮಕ್ಕಳಿಗೆ ಸುಸುತ್ರವಾಗಿ ಶಿಕ್ಷಣ ಹೇಳಿಕೊಡಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಸೂಕ್ತ ಕಾರ್ಯಯೋಜನೆ ಸಹಿತ ಆರಂಭಿಸಿದ ರಾತ್ರಿಶಾಲೆಯ ಫಲಿತಾಂಶಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೇ ಮಕ್ಕಳ ಶಿಕ್ಷಣ ಸುಧಾರಿಸಲು ಸರ್ಕಾರೇತರ ಸಂಸ್ಥೆಗಳಿಗೆ ಆಸಕ್ತಿ ಇದ್ದಲ್ಲಿ ಅವುಗಳೊಂದಿಗೆ ಯೋಜನೆ ಬಗೆಗಿನ ಮಾಹಿತಿ ಹಂಚಿಕೊಳ್ಳಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.