ಸ್ವಚ್ಛ ಮಂಗಳೂರಿನ ಕನಸಿಗೆ ಅಡ್ಡಿ!! ಕಂಡ ಕಂಡಲ್ಲಿ ತ್ಯಾಜ್ಯ ಎಸೆದವನಿಗೆ ಬಿತ್ತು ಬರೋಬ್ಬರಿ ಇಪ್ಪತ್ತು ಸಾವಿರ ದಂಡ
ಮಂಗಳೂರು: ಮಹಾನಗರ ಪಾಲಿಕೆಯ ‘ಸ್ಮಾರ್ಟ್ ಸಿಟಿ’ ಕನಸಿಗೆ ತ್ಯಾಜ್ಯ ವಿಲೇವಾರಿಯೇ ದೊಡ್ಡ ತಲೆ ನೋವಾಗಿದ್ದು, ಕಂಡ ಕಂಡಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಂಡರೂ, ಅಲ್ಪ ಸ್ವಲ್ಪ ದಂಡ ವಿಧಿಸಿದರೂ ಸಾಧ್ಯವಾಗುತ್ತಿಲ್ಲ ಹಾಗೂ ಜನತೆಗೆ ಇನ್ನೂ ಅರ್ಥವಾಗುತ್ತಿಲ್ಲ ಎನ್ನುವುದಕ್ಕೆ ಇದೊಂದು ಪ್ರಕರಣ ನೇರ ಉದಾಹರಣೆಯ ಜೊತೆಗೆ ತಕ್ಕ ಪಾಠ ಕಲಿಸಿದಂತಾಗಿದೆ.
ಹೌದು, ಸ್ವಚ್ಛ ಮಂಗಳೂರು ಆಗಬೇಕೆನ್ನುವ ಕನಸಿಗೆ ನಗರದ ಕಂಕನಾಡಿ ಮಾರ್ಕೆಟ್ ಪರಿಸರವು ತದ್ವಿರುದ್ಧವಾಗಿ ನಡೆದುಕೊಂಡ ಕಾರಣ ತ್ಯಾಜ್ಯ ಎಸೆದ ಹೋಟೆಲ್ ಮಾಲೀಕರೋರ್ವರಿಗೆ ಪಾಲಿಕೆಯು ಸುಮಾರು 20 ಸಾವಿರ ದಂಡ ವಿಧಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು, ಪಾಲಿಕೆಯ ಕಠಿಣ ಕ್ರಮಕ್ಕೆ, ಉತ್ತಮ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಕಂಕನಾಡಿ ಮಾರ್ಕೆಟ್ ಪ್ರದೇಶದ ಸುಂದರ ತಾಣವಾದ ‘ಮಾಡ’ದ ಪರಿಸರದಲ್ಲಿ ಬಕೆಟ್ ಇಟ್ಟು ತ್ಯಾಜ್ಯ ಹಾಕಿರುವ ಕಾರಣ ಹೋಟೆಲ್ ಮಾಲೀಕನಿಗೆ ದಂಡ ವಿಧಿಸಲಾಗಿದ್ದು, ಜೂನ್ 07ರಂದು ದಂಡದ ರಶೀದಿ ಹರಿದ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನಾದರೂ ಸಾರ್ವಜನಿಕರು ಪಾಲಿಕೆಯ ವತಿಯಿಂದ ಇರುವ ತ್ಯಾಜ್ಯ ವಿಲೇವಾರಿ ವಾಹನವನ್ನು ಉಪಯೋಗಿಸಿ, ಸ್ವಚ್ಛ ಮಂಗಳೂರು ನಿರ್ಮಾಣದ ಕನಸಿಗೆ ಕೈಜೋಡಿಸಬೇಕೆನ್ನುವ ಆಗ್ರಹ ವ್ಯಕ್ತವಾಗಿದೆ.