ಕಡಬ: ದೇರಾಜೆ ಶಾಲಾ ಪ್ರಭಾರ ಮುಖ್ಯಶಿಕ್ಷಕರಿಗೆ ಪದೋನ್ನತಿ ಹೊಂದಿ ವರ್ಗಾವಣೆ!! ಊರ ಶಿಕ್ಷಣಾಭಿಮಾನಿಗಳ ವತಿಯಿಂದ ನಡೆಯಿತು ಅಭಿಮಾನದ, ಅಭಿನಂದನೆಯ ಬೀಳ್ಕೊಡುಗೆ
ಕಡಬ: ತಾಲೂಕಿನ ಬಲ್ಯ ಗ್ರಾಮದ ದೇರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕನಾಗಿದ್ದ ಉಮೇಶ್ ನಾಯ್ಕ್ ಅವರು ಮುಖ್ಯಶಿಕ್ಷಕರಾಗಿ ಪದೋನ್ನತಿ ಹೊಂದಿ ಬೆಳ್ತಂಗಡಿ ತಾಲೂಕಿನ ಮಾವಿನಕಟ್ಟೆ ಶಾಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಊರವರ, ಶಿಕ್ಷಣ ಪ್ರೇಮಿಗಳ, ಪೋಷಕರ ವತಿಯಿಂದ ಇಂದು ಅಭಿಮಾನದ ಬೀಳ್ಕೊಡುಗೆ ಸಮಾರಂಭವು ದೇರಾಜೆ ಶಾಲೆಯಲ್ಲಿ ನಡೆಯಿತು.
2004ರ ಫೆಬ್ರವರಿ 21ರಂದು ದೇರಾಜೆ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಉಮೇಶ್ ನಾಯ್ಕ್ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮ ವಹಿಸಿದ್ದರು. ಶಿಕ್ಷಣದಿಂದ ವಂಚಿತರಾಗಿದ್ದ ಹಲವು ವಿದ್ಯಾರ್ಥಿಗಳನ್ನು ‘ಮರಳಿ ಬಾ ಬಾಲೆ ಶಾಲೆಗೆ’ ಕಾರ್ಯಕ್ರಮದಡಿಯಲ್ಲಿ ಶಿಕ್ಷಣದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಉಮೇಶ್ ಮಾಸ್ಟರ್ ಶಾಲಾ ಪೋಷಕರ, ಊರಿನ ಗಣ್ಯರ ಪ್ರೀತಿ ಸಂಪಾದಿಸಿ ಶಿಕ್ಷಣದ ಆಗುಹೋಗುಗಳ ಬಗೆಗೆ, ಶಾಲಾ ಅಭಿವೃದ್ಧಿಯ ಬಗೆಗೆ ಸದಾ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಶಿಕ್ಷಕರಿಗೆ ಇಂದು ಊರಿನ ಶಿಷ್ಯ ವೃಂದ,ಶಾಲಾಭಿವೃದ್ಧಿ ಸಮಿತಿ, ಶಿಕ್ಷಣ ಪ್ರೇಮಿಗಳ ಹಾಗೂ ಪೋಷಕರ ವತಿಯಿಂದ ಅದ್ದೂರಿಯ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸದಾಶಿವ ಗೌಡ ದೇರಾಜೆ, ಊರಿನ ಹಿರಿಯರಾದ ಅಣ್ಣಿ ಪೂಜಾರಿ ಪಲ್ಲತಡ್ಕ, ರೇಜಯ್ಯ ದೇವಾಡಿಗ ಗಾಣದಕೊಟ್ಟಿಗೆ, ಕುಶಾಲಪ್ಪ ಗೌಡ ದೇರಾಜೆ ಭಾಸ್ಕರ ಗೌಡ ಪನ್ಯಾಡಿ, ದೇವಯ್ಯ ಗೌಡ ಪನ್ಯಾಡಿ, ಕೃಷ್ಣಪ್ಪ ದೇವಾಡಿಗ ಸನಿಲ, ಸುಧೀರ್ ದೇವಾಡಿಗ ಗಾಣದಕೊಟ್ಟಿಗೆ, ಅಚ್ಚುತ ಗೌಡ ಪಡ್ನೂರ್, ಮೋಹಿನಿ ಪಡ್ನೂರ್ ಮತ್ತಿತರ ಗಣ್ಯರು, ಪೋಷಕರು, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.