ಉಪ್ಪಿನಂಗಡಿ : ಹಿಜಾಬ್ ಪಟ್ಟು ಸಡಿಲಿಸಿದ ವಿದ್ಯಾರ್ಥಿನಿಯರು; ಹಿಜಾಬ್ ಹೋರಾಟದ ಬಗ್ಗೆ ಹೆತ್ತವರಿಗೆ ಮಾಹಿತಿಯೇ ಇರಲಿಲ್ಲ!

ಉಪ್ಪಿನಂಗಡಿ: ಹೈಕೋರ್ಟ್‌ ಆದೇಶ, ರಾಜ್ಯ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಹಿಜಾಬ್ ಧರಿಸಿ ತರಗತಿಗೆ ಬರಲೆತ್ನಿಸಿದ 24 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ ಬಳಿಕ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿವರ್ತನೆಯ ನಡೆ ಗೋಚರಿಸಿದ್ದು, ಬುಧವಾರ 46 ವಿದ್ಯಾರ್ಥಿನಿಯರು ಹಿಜಾಬ್ ಬೇಡಿಕೆ ಬದಿಗಿಟ್ಟು ತರಗತಿಗೆ ಹಾಜರಾಗಿದ್ದಾರೆ.

 

ಸೋಮವಾರ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರೂ ಅಮಾನತಾಗಿರುವ ವಿದ್ಯಾರ್ಥಿನಿಯರ ಪೈಕಿ ಹಲವರು ಮಂಗಳವಾರ ಕಾಲೇಜಿಗೆ ಬಂದು ತರಗತಿಗೆ ಪ್ರವೇಶಿಸಲು ಯತ್ನಿಸಿದ ಘಟನೆಯ ಬೆನ್ನಲ್ಲೇ ಎಲ್ಲ ವಿದ್ಯಾರ್ಥಿನಿಯರ ಹೆತ್ತವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಯಿತು. ಬಹುತೇಕ ಹೆತ್ತವರು ತಮ್ಮ ಮಕ್ಕಳು ಹಿಜಾಬ್ ಹೋರಾಟದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿಯೇ ಇಲ್ಲವೆಂದು ತಿಳಿಸಿದ್ದರು.

ಒಂದು ವಾರದ ಮೊದಲು ಅಮಾನತಾಗಿದ್ದ ಎಲ್ಲ 6 ವಿದ್ಯಾರ್ಥಿನಿಯರು ಬುಧವಾರ ಕಾಲೇಜಿಗೆ ಆಗಮಿಸಿ ಸಮವಸ್ತ್ರ ನಿಯಮಾವಳಿಯನ್ನು ಪಾಲಿಸುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿ ತರಗತಿಗೆ ಹಾಜರಾಗಿದ್ದಾರೆ. ಬುಧವಾರ ಹಿಜಾಬ್ ಪ್ರತಿಭಟನೆಯಿಂದ ದೂರ ಸರಿದು ಮೊದಲ ಅವಧಿಯಲ್ಲಿ 35 ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದರೆ, 11 ಮಂದಿ ವಿದ್ಯಾರ್ಥಿನಿಯರು ಬಳಿಕದ ಅವಧಿಯ ತರಗತಿಗೆ ಹಾಜರಾಗಿದ್ದಾರೆ. ಇದರಿಂದಾಗಿ ಒಟ್ಟು 101 ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಹೊಂದಿರುವ ಕಾಲೇಜಿನಲ್ಲಿ ಬುಧವಾರ ಸಮವಸ್ತ್ರ ನಿಯಮ ಪಾಲನೆಯೊಂದಿಗೆ ತರಗತಿ ಪ್ರವೇಶಿಸಿದ ವಿದ್ಯಾರ್ಥಿನಿಯರ ಸಂಖ್ಯೆ 46 ಆಗಿದೆ.

ವಿವಾದದಿಂದ ಅಂತರ ಕಾಯ್ದುಕೊಂಡು ಗೈರು ಹಾಜರಾಗುತ್ತಿರುವ ಉಳಿದ ವಿದ್ಯಾರ್ಥಿನಿಯರು ಗುರುವಾರದಿಂದ ಕಾಲೇಜಿಗೆ ಆಗಮಿಸುವ ಭರವಸೆಯನ್ನು ಉಪನ್ಯಾಸಕರು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.