ಕೃಷಿಕರೇ ಗಮನಿಸಿ !! | ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಈ ಯೋಜನೆಯಡಿಯಲ್ಲಿ ದೊರೆಯಲಿದೆ ಶೇ. 80 ರಷ್ಟು ಸಹಾಯಧನ
ರೈತರಿಗೆ ಸಿಹಿ ಸುದ್ದಿಯೊಂದಿದೆ. ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಶೇ. 80 ರಷ್ಟು ಸಹಾಯಧನ ಪಡೆದುಕೊಳ್ಳಬಹುದು. ಹೌದು. ನೀರಾವರಿ ಸೌಲಭ್ಯ ಒದಗಿಸಲು ಸರ್ಕಾರವು ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನವನ್ನು ನೀಡುವ ಯೋಜನೆಯನ್ನು ಆರಂಭಿಸಿದೆ. ಮೊದಲು ಕೃಷಿಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಸಹಾಯಧನ ನೀಡಲಾಗುತ್ತಿತ್ತು. ಈಗ (ನರೇಗಾ) ಮಹಾತ್ಮಗಾಂಧಿ ರಾಷ್ಚ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನವನ್ನು ನೀಡಲಾಗುತ್ತಿದೆ.
ರೈತರ ಕೃಷಿ ಚಟುವಟಿಕೆಗೆ ಮತ್ತು ನೀರಿನ ಅಭಾವ ನೀಗಿಸಲು ಮಳೆಯ ನೀರನ್ನು ಸಂಗ್ರಹಿಸಿ ಅದನ್ನು ಕೃಷಿ ಚಟುವಟಿಕೆಯಲ್ಲಿ ಬಳಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಕೃಷಿ ಹೊಂಡ ರಚನೆ ನಂತರ ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ ಅಳವಡಿಕೆ, ಹೊಂಡದಿಂದ ನೀರೆತ್ತಲು ಡೀಸೆಲ್ ಪಂಪ್ ಸೆಟ್, ತುಂತುರು ನೀರಾವರಿ ಅಳವಡಿಕೆಗೆ ಈ ಯೋಜನೆಯಡಿಯಲ್ಲಿ ಅವಕಾಶವಿದೆ. ಕೃಷಿಹೊಂಡ ನಿರ್ಮಾಣ ಮಾಡಿದ ರೈತರಿಗೆ ಅಳತೆಗನುಗುಣವಾಗಿ ಶೇ. 80 ಸಬ್ಸಿಡಿ ನೀಡಲಾಗುವುದು.
ಕೃಷಿ ಹೊಂಡ ನಿರ್ಮಾಣಕ್ಕೆ ರೈತರ ಬಳಿ ಜಮೀನಿನ ಪಹಣಿ ಇರಬೇಕು. ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್ ಪ್ರತಿ ಇರಬೇಕು. ಆಧಾರ್ ಕಾರ್ಡ್ ಇರಬೇಕು. ಸಂಬಂಧಿಸಿದ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ತಾಂತ್ರಿಕವಾಗಿಯೂ ಕೃಷಿ ಹೊಂಡ ಎಲ್ಲಿ ನಿರ್ಮಿಸಬೇಕು ಎಂಬುದನ್ನು ಸ್ಥಳ ಗುರುತಿಸಿ ಆಗಾಗ ಪರಿಶೀಲನೆ ನಡೆಸುತ್ತಾರೆ. ಕೃಷಿ ಹೊಂಡದ ಸುತ್ತ ನೆರಳು ಪರದೆ ರಚಿಸಲು ಹಾಗೂ ಹೊಂಡದ ಸುತ್ತ ಬದು ನಿರ್ಮಾಣ ಮಾಡಲು ಅವಕಾಶವಿದೆ. ಇತ್ತೀಚೆಗೆ ಕೃಷಿ ಹೊಂಡದಲ್ಲಿ ಜಾನುವಾರುಗಳು, ಜನರಿಗೆ ಅನಾಹುತ ಆಗುವುದನ್ನು ತಪ್ಪಿಸಲು ಹೊಂಡಗಳ ಸುತ್ತಮುತ್ತ ಬೇಲೆ ನಿರ್ಮಾಣವನ್ನು ಕಡ್ಡಾಯಗೊಳಿಸಲಾಗಿದೆ. ಬೇಲಿ ಹಾಕಿಸಿಕೊಳ್ಳಲು ಕೂಡ ಶೇ. 50 ರಷ್ಟು ಸಹಾಯಧನ ಸಿಗಲಿದೆ.
ನರೇಗಾ ಯೋಜನೆಯಡಿಯಲ್ಲಿ ಈಗಾಗಲೇ ರೈತರು ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣದಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಹೊಲದಲ್ಲಿ ಮಳೆ ನೀರು ಹರಿದುಹೋಗುವುದನ್ನು ಇದರಿಂದ ತಡೆಯಬಹುದು.
ಮಣ್ಣು ಕೊಚ್ಚಿ ಹೋಗುವುದನ್ನು ತಡೆಯಲು ಹಾಗೂ ಹೊಲದಲ್ಲಿ ಅಂತರ್ಜಲ ಹೆಚ್ಚಳಕ್ಕಾಗಿ ಕೃಷಿ ಹೊಂಡಗಳನ್ನು ಉದ್ಯೋಗ ಖಾತ್ರಿ ಯೋಜನೆಯಿಂದ ನಿರ್ಮಿಸಿಕೊಳ್ಳಬಹುದು. ರೈತರು ಕೃಷಿ ಹೊಂಡ ನಿರ್ಮಿಸಿಕೊಳ್ಳಬೇಕಾದರೆ ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ಹೊಂದಿರಬೇಕು.
ಈ ಕಾರ್ಡ್ ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹಾಗೂ ರೈತ ಮಹಿಳೆಯರು ಅರ್ಹರಾಗಿರುತ್ತಾರೆ. ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲಿಚ್ಚಿಸಿದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಅಥವಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬೇಕು.
ಅಲ್ಲಿ ನಿಮ್ಮ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಪಡೆದು ಭರ್ತಿ ಮಾಡಿ ಕೃಷಿ ಹೊಂಡ ನಿರ್ಮಾಣ ಮಾಡಬಹುದು. ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅವಕಾಶವಿದೆ. ರೈತರು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು. ಲಭ್ಯತೆಯ ಆಧಾರದ ಮೇಲೆ ತೋಟಗಾರಿಕೆ ಇಲಾಖೆಯು ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ನೀಡುವುದು.