ದೈವಸ್ಥಾನದ ಮೇಲ್ಛಾವಣಿ ರಸ್ತೆ ಸಂಚಾರಕ್ಕೆ ಅಡ್ಡಿ ಎನ್ನುವ ಆಕ್ಷೇಪ!! ಕೆಲವೇ ಕ್ಷಣಗಳಲ್ಲಿ ಆಕ್ಷೇಪಣೆ ಹಿಂಪಡೆದ ಮುಸ್ಲಿಂ ಕುಟುಂಬ
ಉಡುಪಿ: ಇಲ್ಲಿನ ಪಡುಬಿದ್ರೆಯ ಕಂಚಿನಡ್ಕ ಗ್ರಾಮದ ಮುಂಡಾಲ ಸಮಾಜದ ಮಿಂಚಿನಬಾವಿಯ ಬಬ್ಬುಸ್ವಾಮಿ ದೈವಸ್ಥಾನ ಮೇಲ್ಛಾವಣಿ ನಿರ್ಮಾಣಕ್ಕೆ ಎರಡು ಮುಸ್ಲಿಂ ಕುಟುಂಬಗಳು ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದ ಆಕ್ಷೇಪವನ್ನು ನಿನ್ನೆ ಅವರಾಗಿಯೇ ಹಿಂಪಡೆದಿವೆ.
ದೈವಸ್ಥಾನವು ರಸ್ತೆಯ ಪಕ್ಕದಲ್ಲಿದ್ದು ಮೇಲ್ಛಾವಣಿಯಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಆಕ್ಷೇಪ ಸಲ್ಲಿಸಲಾಗಿತ್ತು. ಈ ಬಗ್ಗೆ ದೈವಸ್ಥಾನದ ಆಡಳಿತ ಮಂಡಳಿ ಮತ್ತು ಹಿಂದೂ ಪರ ಸಂಘಟನೆಗಳು ಸಭೆ ನಡೆಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಹದಗೆಡುವ ಸಂದರ್ಭ ನಿರ್ಮಾಣವಾಗಿತ್ತು.
ಇದೀಗ ಆಕ್ಷೇಪವನ್ನು ಹಿಂಪಡೆದ ಮೇಲೆ ಮಾತನಾಡಿದ ಮುಸ್ಲಿಂ ಕುಟುಂಬದ ಸದಸ್ಯರೊಬ್ಬರು, 2004ರಿಂದ ಈ ದೈವಸ್ಥಾನದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿದ್ದು,
ನಾವು ಯಾವುದೇ ಅಡ್ಡಿ ಮಾಡಿಲ್ಲ. ಈಗ ಮೇಲ್ಛಾವಣಿಗೂ ನಮ್ಮ ಆಕ್ಷೇಪ ಇಲ್ಲ, ಜನರು ಓಡಾಡುವ ರಸ್ತೆ ಮೇಲೆ ಮೇಲ್ಛಾವಣಿ ಹಾಕಬೇಡಿ ಎಂದಷ್ಟೇ ಹೇಳಿದ್ದೆವು.
ಆದರೆ ನಮ್ಮಿಂದ ಗಲಾಟೆಯಾಗಬಾರದು ಎಂಬ ಕಾರಣಕ್ಕೆ ಈ ಆಕ್ಷೇಪವನ್ನು ಹಿಂದಕ್ಕೆ ಪಡೆದಿದ್ದೇವೆ. ಕಾನೂನು ಎಲ್ಲರಿಗೂ ಒಂದೇ, ನಮ್ಮಿಂದ ಗಲಾಟೆಯಾಗಬಾರದು ಎಂದು ಆಕ್ಷೇಪವನ್ನು ಹಿಂದಕ್ಕೆ ಪಡೆದಿದ್ದೇವೆ. ಕಾನೂನು ಎಲ್ಲರಿಗೂ ಒಂದೇ, ಯಾರನ್ನೂ ಹೆದರಿಸುವ ಪ್ರಯತ್ನಗಳಾಗಬಾರದು ಎಂದಿದ್ದಾರೆ.
ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಮಾತನಾಡಿ, ಪಂಚಾಯಿತಿಯಿಂದ ಕಾನೂನು ರೀತಿಯಲ್ಲಿ ಸಮಸ್ಯೆ ಬಗೆಹರಿಸಲಿದೆ. ದೈವಸ್ಥಾನಕ್ಕೆ ಮನೆ ನಂಬರ್ ಇಲ್ಲದಿರುವುದರಿಂದ ಪರವಾನಗಿ ನೀಡುವುದಕ್ಕಾಗುವುದಿಲ್ಲ. ಎಲ್ಲರೂ ಸೌಹಾರ್ದತೆಯಿಂದ ಸಹಕರಿಸಬೇಕು ಎಂದಿದ್ದಾರೆ.