ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಬದಲಾವಣೆ!
ಬೆಂಗಳೂರು : ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರ ನೇಮಕಾತಿ ಕುರಿತು ಸರ್ಕಾರ ಸಿಹಿಸುದ್ದಿ ನೀಡಿದ್ದು, ನೇಮಕಾತಿ ನಿಯಮಗಳಲ್ಲಿ ಅಂಕಗಳ ಮಿತಿಯನ್ನು ಸಡಿಲಿಕೆ ಮಾಡಿದೆ.
ರಾಜ್ಯ ಸರ್ಕಾರದಿಂದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರನ್ನು ಸಿ ಆರ್ ಪಿ, ಬಿಆರ್ ಪಿ ಹಾಗೂ ಇಸಿಓ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಪರೀಕ್ಷೆಯ ಶೇ.50ರ ಅಂಕಗಳ ಮೆರಿಟ್ ಆಧಾರವನ್ನು ನಿಗಧಿ ಪಡಿಸಲಾಗಿತ್ತು. ಆದರೆ, ಈ ನಿಯಮವನ್ನು ಸಡಿಲಿಕೆ ಮಾಡುವಂತೆ ಕೋರಿದ್ದಂತ ಪ್ರಸ್ತಾವನೆಗೆ ಸರ್ಕಾರ ಅನುಮತಿ ನೀಡಿದ್ದು, ಶೇ.50ರ ಅಂಕಗಳ ಮಿತಿಯನ್ನು ಸಡಿಲಿಸಿದೆ.
ಈ ಕುರಿತಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಂಬಂಧ ಸಿ ಆರ್ ಪಿ, ಬಿ ಆರ್ ಪಿ ಹಾಗೂ ಇಸಿಓ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಗಳಿಸಿದಂತ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳೋದಾಗಿ ಹೇಳಿತ್ತು. ಇದಲ್ಲದೇ ಪರೀಕ್ಷೆಯ ಪತ್ರಿಕೆ -1 ಮತ್ತು ಪತ್ರಿಕೆ-2ರಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳ ಮಾನದಂಡವನ್ನು ಆಯ್ಕೆಗೆ ನಿಗದಿ ಪಡಿಸಿತ್ತು.
ಈಗ ಈ ಮೆರಿಟ್ ಆಧಾರದ ನೇಮಕಾತಿ ಅನುಮತಿಯನ್ನು ಸಡಿಲಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು, ರಾಜ್ಯ ಸರ್ಕಾರವನ್ನು ಪ್ರಸ್ತಾವನೆಯಲ್ಲಿ ಕೋರಿತ್ತು. ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆ ಸಲ್ಲಿಸಿದ್ದಂತ ಶೇ.50ರ ಕನಿಷ್ಠ ಅಂಕಗಳ ಮಿತಿ ಸಡಿಲಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಮೆರಿಟ್ ಆಧಾರದ ಮೇಲೆ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಿದೆ.