ರೈತರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ !! | ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 956.71 ಕೋಟಿ ರೂ. ಸಹಾಯಧನ ವರ್ಗಾವಣೆ
ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ರಾಜ್ಯದ 47.83 ಲಕ್ಷ ರೈತರಿಗೆ 956.71 ಕೋಟಿ ರೂ.ಗಳ ಆರ್ಥಿಕ ಸಹಾಯಧನ ವರ್ಗಾಯಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅವರು ರೈತರ ಖಾತೆಗಳಿಗೆ ಸಹಾಯಧನ ವರ್ಗಾಯಿಸಿದ್ದು, 2018-19 ರಿಂದ 2021-22 ರವರೆಗೆ ಭಾರತ ಸರ್ಕಾರದಿಂದ ಅನುಮೋದಿಸಲ್ಪಟ್ಟ ರೈತ ಕುಟುಂಬಗಳಿಗೆ ಒಟ್ಟು 3864.66 ಕೋಟಿ ರೂ. ರಾಜ್ಯದ ರೈತರಿಗೆ ಪಾವತಿಯಾದಂತಾಗಿರುತ್ತದೆ. 2021-22 ನೇ ಸಾಲಿನಲ್ಲಿ 50.35 ಲಕ್ಷ ರೈತರಿಗೆ 1975.12 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಎಲ್ಲಾ ಪಾವತಿಗಳನ್ನು ಸಾಧ್ಯವಾದಷ್ಟು ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಮಾಡಲಾಗಿದೆ.
ದೇಶದ ಎಲ್ಲಾ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯವು ಅತಿಹೆಚ್ಚು ಅಂದರೆ 96% ರಷ್ಟು ಆಧಾರ್ ಆಧಾರಿತ ಪಾವತಿಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ರಾಜ್ಯವಾಗಿದ್ದು, ಕಳೆದ ಬಾರಿ 2020-21 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯದ ಕೃಷಿಇಲಾಖೆಗೆ ಪ್ರಶಸ್ತಿಯು ಲಭಿಸಿದೆ. 2019 ರಿಂದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಅರ್ಹ ರೈತರಿಗೆ ಹೆಚ್ಚುವರಿಯಾಗಿ 4 ಸಾವಿರ ರೂ.ಗಳ ಆರ್ಥಿಕ ನೆರವನ್ನು ಎರಡು ಕಂತುಗಳಲ್ಲಿ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡುತ್ತಿದೆ. ಆಧಾರ್ ಗುರುತಿನ ಸಂಖ್ಯೆಯಾಧಾರದ ಮೇಲೆ ನೇರ ನಗದು ವರ್ಗಾವಣೆ ಪ್ರಕ್ರಿಯೆ ಮೂಲಕ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.
ಅಲ್ಲದೆ, ರಸಗೊಬ್ಬರದ ಕುರಿತು ಮಾತನಾಡಿ “ರಾಜ್ಯದಲ್ಲಿ ಮೇ 31ರ ಮಾಹಿತಿ ಪ್ರಕಾರ 1.26 ಲಕ್ಷ ಮೆಟ್ರಿಕ್ ಟನ್ ಡಿಎಪಿ (DAP) ಲಭ್ಯವಿದ್ದು, ಒಟ್ಟಾರೆ, 7.64 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ರಾಜ್ಯದ ಬೇಡಿಕೆ ಪೂರೈಸಲು ಯಾವುದೇ ಕೊರತೆ ಇಲ್ಲ. ಆದರೆ, ವ್ಯವಸ್ಥಿತವಾಗಿ ಅಗತ್ಯ ಆಧರಿಸಿ, ರಸಗೊಬ್ಬರ ಸಕಾಲದಲ್ಲಿ ಪೂರೈಸಲು ಹಿರಿಯ ಅಧಿಕಾರಿಗಳೇ ಮೇಲ್ವಿಚಾರಣೆ ನಡೆಸಿ, ಯಾವುದೇ ಕೃತಕ ಅಭಾವ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು” ಎಂದು ಸೂಚನೆ ನೀಡಿದ್ದಾರೆ.
ಬಿತ್ತನೆ ಬೀಜ ರಾಜ್ಯದಲ್ಲಿ 7.81 ಲಕ್ಷ ಕ್ವಿಂಟಾಲ್ ನಷ್ಟು ಲಭ್ಯವಿದ್ದು, ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಲಭ್ಯವಿದೆ. ಆದರೆ ನಕಲಿ ಬೀಜಗಳ ಹಾವಳಿಯನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಈ ಕುರಿತು ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಬೇಕು. ನಕಲಿ ಬೀಜ ಪೂರೈಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ್, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ, ಕೃಷಿ ಇಲಾಖೆ ಆಯುಕ್ತ ಶರತ್, ನಿರ್ದೇಶಕಿ ನಂದಿನಿಕುಮಾರಿ, ಜಲಾನಯನ ಇಲಾಖೆ ಆಯುಕ್ತ ಡಾ. ವೆಂಕಟೇಶ್, ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.