ಮಂಗಳೂರಿನಲ್ಲಿ ಕಟ್ಟಡವೊಂದರ ಕೊಠಡಿಯಿಂದ ಹಣದ ಸುರಿಮಳೆ!!! ಹಣ ಹೆಕ್ಕಲು ಮುಗಿಬಿದ್ದ ಜನ!
ಮಂಗಳೂರು : ಬಿಸಿ ರೋಡ್ ನ ಕಟ್ಟಡವೊಂದರ ಕೊಠಡಿಯಿಂದ ಗುರುವಾರ ಹಣದ ಸುರಿಮಳೆಯಾಗಿದೆ. ಹೌದು. ಕಟ್ಟಡದ ಮೇಲಿಂದ ಹಣ ಬೀಳುವುದನ್ನು ಕಂಡ ಜನ ಹಣ ಹೆಕ್ಕಲು ಮುಗಿಬಿದ್ದಿದ್ದರಿಂದ ಕೆಲಕಾಲ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಅಕ್ರಮ ಜೂಜಾಟ ನಡೆಯುವಲ್ಲಿಗೆ ದಾಳಿ ಮಾಡಿದಾಗ ಹಣದ ಸುರಿಮಳೆ ನಡೆದಿದೆ. ಬಿ.ಸಿ.ರೋಡ್ನ ಕಟ್ಟಡದಲ್ಲಿ ನಡೆಯುತ್ತಿದ್ದ ರಿಕ್ರಿಯೇಶನ್ ಕ್ಲಬ್ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆ ಸಹಾಯಕ ಪೊಲೀಸ್ ಅಧೀಕ್ಷಕರ ಅನುಮತಿ ಪಡೆದು ಪೊಲೀಸ್ ನಿರೀಕ್ಷಕ ವಿವೇಕಾನಂದ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. 2 ಆರೋಪಿಗಳು ಅಕ್ರಮ ಜೂಜಾಟದಲ್ಲಿ ತೊಡಗಿದ್ದರು. ದಿಢೀರ್ ಪೊಲೀಸ್ ದಾಳಿ ಕಂಡ ಕೆಲವರು ಕಿಟಕಿಗಳ ಮೂಲಕ ನೋಟುಗಳನ್ನು ಕೆಳಗೆ ಎಸೆದಿದ್ದಾರೆ. ಈ ನೋಟುಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಟ್ಟಡದ ಮೇಲಿಂದ ಹಣ ಬೀಳುವುದನ್ನು ಕಂಡ ಜನ ನೋಟುಗಳನ್ನು ಹಾಯ್ದುಕೊಳ್ಳಲು ನಾ ಮುಂದು ತಾ ಮುಂದು ಎಂಬಂತೆ ಮುಗಿಬಿದ್ದಿದ್ದರು. ಅತ್ತ ಪೊಲೀಸರು ಆರೋಪಿಗಳನ್ನು ಬಂಧಿಸಿ 26,900 ರೂ. ವಶಕ್ಕೆ ಪಡೆದಿದ್ದಾರೆ.