ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕಬೇಕಿಲ್ಲ, ಇನ್ನು ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ | ಅಚ್ಚರಿಯ ಹೇಳಿಕೆ ನೀಡಿದ ಮೋಹನ್ ಭಾಗವತ್

ನಾಗಪುರ(ಜೂ.03): ಗ್ಯಾನವಾಪಿ ಕಾಶಿ ಸೇರಿ ಇತರ ಮಸೀದಿಗಳ ಕುರಿತು ವಿವಾದ ಎದ್ದಿರುವ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ದೇಶಾದ್ಯಂತ ಈಗ ಮಂದಿರ ಮಸೀದಿ ವಿವಾದ ಸೃಷ್ಟಿ ಆಗಿರುವ ನಡುವೆಯೇ ಸಂಘದ ಮುಖ್ಯಸ್ಥರ ಈ ಹೇಳಿಕೆ ಭಾರಿ ಮಹತ್ವ ಪಡೆದಿದೆ. ಅವರ ಹೇಳಿಕೆ, ಓರ್ವ ಹಿರಿಯ ಮತ್ತು ಮುತ್ಸದ್ದಿಯ ಯೋಚನೆಯಂತಿದ್ದು, ಧರ್ಮಗಳ ನಡುವೆ ಇರುವ ಕಂದಕ ಹೆಚ್ಚುತ್ತಿರುವ ಸಂದರ್ಭ ಮಹತ್ವದ್ದೆನಿಸಿದೆ.

 

ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಿಲ್ಲ. ಮುಸ್ಲಿಮರೇನು ಹೊರಗಿನವರಲ್ಲ, ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ, ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಆರೆಸ್ಸೆಸ್ ಪಾಲ್ಗೊಂಡಿತ್ತು ನಿಜ. ಇನ್ನು ಮುಂದೆ ಇಂತಹ ಹೋರಾಟದಲ್ಲಿ ಭಾಗಿಯಾಗಲ್ಲ ಎಂದಿದ್ದಾರೆ. ಅಲ್ಲದೆ, ‘ಗ್ಯಾನವಾಪಿ ಮಸೀದಿ ವಿವಾದವನ್ನು ಹಿಂದೂ ಹಾಗೂ ಮುಸ್ಲಿಂ
ಪಂಗಡಗಳು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು. ಇಲ್ಲವೇ ಕೋರ್ಚ್ ಆದೇಶ ಪಾಲಿಸಬೇಕು ಎಂದಿದ್ದಾರೆ.

ಗುರುವಾರ ಸಂಜೆ ಆರೆಸ್ಸೆಸ್ ತರಬೇತಿ ಶಿಬಿರದಲ್ಲಿ ಮಾತನಾಡಿದ ಭಾಗವತ್ ಅವರು, ‘ನಮ್ಮ ಜಾಯಮಾನ ಅಲ್ಲದಿದ್ದರೂ, ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಕೆಲ ಐತಿಹಾಸಿಕ ಕಾರಣ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಆರೆಸ್ಸೆಸ್ ಪಾಲ್ಗೊಂಡಿತ್ತು ನಿಜ. ಆದರೆ ಇನ್ನು ಮುಂದೆ ಇಂಥ ಹೋರಾಟದಲ್ಲಿ ಭಾಗಿಯಾಗಲ್ಲ ಎಂದು ಈ ಹಿಂದೆಯೇ ಹೇಳಿದ್ದೆವು. ಈಗಲೂ ನಮ್ಮ ನಿಲುವು ಬದಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

‘ಕಾಶಿ ಗ್ಯಾನವಾಪಿ ಮಸೀದಿ ವಿವಾದದಲ್ಲಿ ಇರುವವರೆಲ್ಲ ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳಬೇಕು. ಆದರೆ ಇದು ಎಲ್ಲ ಸಮಯದಲ್ಲೂ ಸಾಧ್ಯ ಆಗದು. ಹೀಗಾಗಿ ಕೋರ್ಚ್‌ನಲ್ಲಾದರೂ ತೀರ್ಪು ಬಂದಾಗ ಸ್ವೀಕಾರ ಮಾಡಬೇಕು’ ಎಂದರು.

ಇತಿಹಾಸವನ್ನು ನಾವು ಮಾಡಿದ್ದಲ್ಲ. ಇಂದಿನ ಹಿಂದೂ ಮುಸ್ಲಿಮರೂ ಅಲ್ಲ. ಭಾರತದ ಮೇಲೆ ಇಸ್ಲಾಂ ಅರಸರು ದಂಡೆತ್ತಿ ಬಂದಾಗ ಗ್ಯಾನವಾಪಿ ನಿರ್ಮಾಣದಂಥ ಪ್ರಸಂಗ ಜರುಗಿವೆ. ನೂರಾರು ದೇಗುಲ ನಾಶವಾಗಿವೆ. ಹಾಗಂತ ದಿನಕ್ಕೊಂದು ಹೊಸ ವಿವಾದ ಏಕೆ ಸೃಷ್ಟಿಸಬೇಕು? ಎಲ್ಲ ಮಸೀದಿಗಳಲ್ಲೂ ಏಕೆ ಶಿವಲಿಂಗ ಹುಡುಕಬೇಕು?’ ಎಂದು ಪ್ರಶ್ನಿಸಿದರು. ಮುಸ್ಲಿಮರ ದೇವಾರಾಧನೆ ಹೊರದೇಶದ ಪದ್ಧತಿ ಆಧರಿತವಾಗಿದ್ದರೂ, ಅವರು ಹೊರಗಿನವರಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅವರೂ ಭಾಗಿಯಾಗಿದ್ದಾರೆ ಎಂದರು.

Leave A Reply

Your email address will not be published.