ಬೆಳಗಾವಿ: ಮಂದಿರವಿದ್ದ ಬಗ್ಗೆ ಸಾಕ್ಷ್ಯ ಸಂಗ್ರಹ, ಸಮೀಕ್ಷೆಗೆ ಶಾಸಕ ಅಭಯ್‌ ಪಾಟೀಲ್‌ ಒತ್ತಾಯ

Share the Article

ಬೆಳಗಾವಿ: ನಗರದ ರಾಮದೇವ ಗಲ್ಲಿಯಲ್ಲಿರುವ ಮಸೀದಿಯೊಂದು ಮೊದಲು ಹಿಂದೂ ದೇವಸ್ಥಾನವಾಗಿತ್ತು ಎಂದು ಈಚೆಗಷ್ಟೇ ಹೇಳಿಕೆ ನೀಡಿದ್ದ ದಕ್ಷಿಣ ಶಾಸಕ ಅಭಯ್‌ ಪಾಟೀಲ್‌, ಈ ಕುರಿತು ಸಮೀಕ್ಷೆ ನಡೆಸುವಂತೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌ ಅವರನ್ನು ಭೇಟಿ ಬೆನ್ನಲ್ಲೇ, ಮಾಜಿ ಶಾಸಕ ಫಿರೋಜ್‌ ಸೇಠ್‌ ಹಾಗೂ ಮುಖಂಡರು ಪ್ರಾದೇಶಿಕ ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ”ಇದು ಮುಸ್ಲಿಮರನ್ನು ಪ್ರಚೋದಿಸಿ ಶಾಂತಿ ಕದಡುವ ಹುನ್ನಾರ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಭಯ್‌ ಪಾಟೀಲ್‌ ”ಅಲ್ಲಿ ಮಂದಿರ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗಾಗಿ ತಹಸೀಲ್ದಾರ್‌ ಮತ್ತು ಪುರಾತತ್ವ ಇಲಾಖೆಯವರಿಂದ ಮಸೀದಿ ಜಾಗದ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿ ಅದಕ್ಕೆ ಸಮ್ಮತಿಸಿದ್ದಾರೆ. ಸಮೀಕ್ಷೆ ನಡೆಸಲು ಯಾವುದೇ ಗಡುವು ನೀಡಿಲ್ಲ. ಇನ್ನೊಂದು ವಾರದೊಳಗಾಗಿ ಜಿಲ್ಲಾಧಿಕಾರಿ ಈ ಕುರಿತು ಕ್ರಮ ವಹಿಸಬಹುದು ಎಂಬ ನಿರೀಕ್ಷೆ ಇದೆ. ಅಷ್ಟರೊಳಗೆ ಸಮೀಕ್ಷೆ ಆಗದಿದ್ದರೆ ಮತ್ತೊಮ್ಮೆ ಭೇಟಿ ಮಾಡಿ ಒತ್ತಾಯಿಸಲಾಗುವುದು” ಎಂದರು.

ಮಸೀದಿ ಜಾಗದಲ್ಲಿ ಮೊದಲು ಮಂದಿರವಿದ್ದ ಬಗ್ಗೆ ತಮ್ಮ ಬಳಿ ಸಾಕ್ಷ್ಯಗಳಿವೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಭಯ್‌ ಪಾಟೀಲ್‌, ”ಕೆಲವು ಸಾ ಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಜಿಲ್ಲಾಡಳಿತದಿಂದ ಸಮೀಕ್ಷಾ ವರದಿ ಬಂದ ಬಳಿಕ ಎಲ್ಲ ವಿಷಯಗಳನ್ನು ತಾಳೆ ಹಾಕಿ ಚರ್ಚೆ ನಡೆಸಲಾಗುತ್ತದೆ” ಎಂದರು.

ಮುಸ್ಲಿಮರನ್ನು ಪ್ರಚೋದಿಸುವ ಹುನ್ನಾರ ಎಂದ ಫಿರೋಜ್‌ ಸೇಠ್‌

ನಗರದ ರಾಮದೇವ ಗಲ್ಲಿಯ ಮಸೀದಿ ಮೊದಲು ಮಂದಿರವಾಗಿತ್ತು ಎಂಬ ಸ್ಥಳೀಯರ ಹೇಳಿಕೆಯ ಮೇರೆಗೆ ಶಾಸಕ ಅಭಯ್‌ ಪಾಟೀಲ್‌ ಅವರು ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬೆನ್ನಲ್ಲೇ, ಮಾಜಿ ಶಾಸಕ ಫಿರೋಜ್‌ ಸೇಠ್‌ ಅವರು ಮುಸ್ಲಿಂ ಧಾರ್ಮಿಕ ಮುಖಂಡರ ನಿಯೋಗದೊಂದಿಗೆ ತೆರಳಿ ಪ್ರಾದೇಶಿಕ ಆಯುಕ್ತರನ್ನು ಭೇಟಿ ಮಾಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಫಿರೋಜ್‌ ಸೇಠ್‌, ”ಈ ವಿವಾದ ಹುಟ್ಟುಹಾಕಿರುವುದರ ಹಿಂದೆ ಮುಸ್ಲಿಮರನ್ನು ಪ್ರಚೋದಿಸುವ ಹುನ್ನಾರವಿದೆ. ಆದರೆ ನಾವು ಪ್ರಚೋದನೆಗೆ ಒಳಗಾಗುವುದಿಲ್ಲ. ಶಾಂತಿ ಮತ್ತು ಪ್ರೀತಿಯಿಂದ ಎಲ್ಲವನ್ನೂ ಎದುರಿಸುತ್ತೇವೆ” ಎಂದರು.

”1991ರ ಪಾರ್ಲಿಮೆಂಟ್‌ ಆಕ್ಟ್ ಪ್ರಕಾರ, 1991ಕ್ಕಿಂತ ಮೊದಲು ಯಾವ್ಯಾವ ಸ್ಥಳಗಳಲ್ಲಿ ಯಾವ ಧರ್ಮದ ಪ್ರಾರ್ಥನಾ ಸ್ಥಳಗಳಿವೆಯೋ ಅವು ಅದೇ ಧರ್ಮದ ಪ್ರಾರ್ಥನಾ ಸ್ಥಳಗಳಾಗಿ ಮುಂದುವರಿಯಬೇಕು. ಮಂದಿರ-ಮಸೀದಿ ವಿವಾದದಿಂದ ಸಮಾಜದಲ್ಲಿ ದ್ವೇಷ ಬೆಳೆಯಲು ಕಾರಣವಾಗುತ್ತದೆ. ಈ ಎರಡೂ ವಿಷಯಗಳನ್ನು ಪ್ರಾದೇಶಿಕ ಆಯುಕ್ತರ ಗಮನಕ್ಕೆ ತರಲಾಗಿದೆ. ಶಾಂತಿ ಭಂಗವಾಗದಂತೆ ಕ್ರಮ ಕೈಗೊಳ್ಳಲು ಕೋರಲಾಗಿದೆ” ಎಂದರು.

ಚುನಾವಣಾ ಗಿಮಿಕ್‌ ಎಂದ ಮುಸ್ಲಿಂ ಮುಖಂಡ

ರಾಮದೇವ ಗಲ್ಲಿ ಮಸೀದಿ ವಿವಾದದ ಕುರಿತು ಶಾಸಕ ಅಭಯ್‌ ಪಾಟೀಲ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿಯ ಎಐಎಂಐಎಂ ಮುಖಂಡ ಲತೀಫ್‌ ಖಾನ್‌ ಪಠಾಣ್‌, ಇದೊಂದು ಚುನಾವಣಾ ಗಿಮಿಕ್‌ ಎಂದು ಆರೋಪಿಸಿದ್ದಾರೆ.

”ಆರ್‌ಎಸ್‌ಎಸ್‌ ಮತ್ತು ವಿಹಿಂಪ ಸಂಘಟನೆಗಳು ದೇಶಾದ್ಯಂತ 30 ಸಾವಿರಕ್ಕೂ ಹೆಚ್ಚು ಸೂಕ್ಷ್ಮ ಸ್ಥಳಗಳ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿಟ್ಟುಕೊಂಡಿವೆ. ಯಾವಾಗ ಅಗತ್ಯ ಬೀಳುತ್ತದೆಯೋ ಅಂಥ ಸಂದರ್ಭದಲ್ಲಿ ಮಂದಿರ- ಮಸೀದಿ ವಿಷಯವನ್ನು ಮುನ್ನೆಲೆಗೆ ತಂದು ಜನರ ಗಮನವನ್ನು ಅಭಿವೃದ್ಧಿ ವಿಚಾರದಿಂದ ಬೇರೆಡೆ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಡಳಿತ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಎಲ್ಲೆಡೆ ಮಂದಿರ-ಮಸೀದಿ ವಿಷಯವನ್ನು ಮುನ್ನೆಲೆಗೆ ತರುತ್ತಿವೆ” ಎಂದು ದೂರಿದರು.

ಬೆಳಗಾವಿಯಲ್ಲಿರುವ ಕಪಿಲೇಶ್ವರ ಮಂದಿರ ಬಹಳ ದೊಡ್ಡ ದೇವಸ್ಥಾನವಾಗಿತ್ತು. ಆದರೆ ಅದೀಗ ಸಣ್ಣ ದೇವಸ್ಥಾನವಾಗಿ ಉಳಿದುಕೊಂಡಿದೆ. ಕಪಿಲೇಶ್ವರ ಮಂದಿರ ಕೆಡವಿ ಏನನ್ನು ನಿರ್ಮಿಸಲಾಗಿದೆ ಎಂಬ ಬಗ್ಗೆಯೂ ಸಮೀಕ್ಷೆಯಾಗಲಿ.
-ಲತೀಫ್‌ಖಾನ್‌ ಪಠಾಣ್‌, ಎಐಎಂಐಎಂ ಮುಖಂಡ

Leave A Reply