ರಾಜ್ಯದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದ ಯುವಕರ ಬುರ್ಖಾ ಡ್ಯಾನ್ಸ್ !!
ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಧರ್ಮ ದಂಗಲ್ ನಡೆಯುತ್ತಿದೆ. ಈ ನಡುವೆ ಶಾಂತಿ ಪ್ರಿಯ ಜಿಲ್ಲೆ ಕೊಡಗಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲಾ ಆವರಣದಲ್ಲಿ ಬಂದೂಕು ತರಬೇತಿ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈ ಚರ್ಚೆ ತಣ್ಣಗಾಗುವ ಮೊದಲೇ ಇದೀಗ ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಲ್ಲಿ ಬುರ್ಖಾ ಹಾಕಿ ಕೆಲ ಯುವಕರು ನೃತ್ಯ ಮಾಡಿರುವುದು ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ.
ಕೊಳಕೇರಿ ಗ್ರಾಮದಲ್ಲಿ ಮೇ 28 ಮತ್ತು 29ರಂದು ಪಶ್ಚಿಮ ಕೊಳಕೇರಿ ಗ್ರಾಮಾಭಿವೃದ್ದಿ ಸಂಘದ ವಜ್ರಮಹೋತ್ಸವ ಆಚರಣೆಯನ್ನು ಪಶ್ಚಿಮ ಕೊಳಕೇರಿ ರಮೇಶ್ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಕೆಲ ಯುವಕರು ಬುರ್ಖಾ ಹಾಕಿ ಕೊಡವ ವಾಲಗಕ್ಕೆ ನೃತ್ಯ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜಿಲ್ಲೆಯ ಮುಸ್ಲಿಂ ಸಮುದಾಯದ ಮುಖಂಡರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಸ್ಲಿಂ ಧಾರ್ಮಿಕ ಉಡುಪುಗಳಿಗೆ ಅಪಮಾನ ಮಾಡಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನೃತ್ಯದ ಬಗ್ಗೆ ಪಶ್ಚಿಮ ಕೊಳಕೇರಿ ಗ್ರಾಮಾಭಿವೃದ್ದಿ ಸಂಘದ ಪ್ರಮುಖರು ಮಾತನಾಡಿ, ಈ ನೃತ್ಯ ಮಾಡಿರುವುದು ಯಾವುದೇ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಅಲ್ಲ. ಕೇವಲ ಮನರಂಜನೆಗೆ ಮಾತ್ರ ಕೆಲ ಯುವಕರು ಬುರ್ಖಾ ಧರಿಸಿಕೊಂಡು ನೃತ್ಯ ಮಾಡಿದ್ದಾರೆ. ಕೊಡಗಿನಲ್ಲಿ ಸಾಕಷ್ಟು ಶಾಲಾ ಕಾಲೇಜಿನಲ್ಲಿ ಇರುವ ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಯ ಕಾರ್ಯಕ್ರಮಗಳಲ್ಲಿ ಕೊಡವ ಉಡುಗೆ ತೊಡುಗೆಗಳನ್ನು ಹಾಕಿ ನೃತ್ಯ ಮಾಡುತ್ತಾರೆ. ಅವರು ಮಾಡುವ ನೃತ್ಯಗಳನ್ನು ನೋಡಿದ್ರೆ ನಮಗೂ ನಮ್ಮ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುತ್ತಾರೆ ಎನ್ನುವ ಖುಷಿ ಇದೆ. ನಾವು ಯಾವತ್ತೂ ಆಕ್ಷೇಪಣೆ ಮಾಡಿಲ್ಲ. ಆದರೆ ಇದೀಗ ಈ ನೃತ್ಯದ ಬಗ್ಗೆ ಸುಮ್ಮನೆ ಅಪಪ್ರಾಚಾರ ಮಾಡುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಎಲ್ಲಾ ಜನಾಂಗೀಯ ಜನರು ಒಟ್ಟಾಗಿ ಸಹಬಾಳ್ವೆಯಿಂದ ಬದುಕು ನಡೆಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.