ಬಿಜೆಪಿ ಕಾರ್ಯಕರ್ತರು ಪೊಲೀಸ್ ಸ್ಟೇಷನ್ ಗೆ ಕಾಲಿಡುವಂತಿಲ್ಲ !! | ವೈರಲ್ ಆಯ್ತು ಠಾಣಾ ಮುಂಭಾಗದ ಬ್ಯಾನರ್
ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದರ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಠಾಣೆ ಮೆಟ್ಟಿಲು ಹತ್ತುವಂತಿಲ್ಲ ಎಂಬ ಪೋಸ್ಟರ್ ಒಂದು ಇದೀಗ ಭಾರೀ ವೈರಲ್ ಆಗಿದೆ. ಬಿಜೆಪಿ ಕಾರ್ಯಕರ್ತರ ಪ್ರವೇಶವನ್ನು ನಿಷೇಧಿಸಿ ಪೊಲೀಸ್ ಠಾಣೆಯ ಹೊರಗೆ ‘ಆಕ್ಷೇಪಾರ್ಹ ಬ್ಯಾನರ್’ ಹಾಕಿದ್ದ ಆರು ಮಂದಿಯನ್ನು ಉತ್ತರ ಪ್ರದೇಶದ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನಗರದ ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಯ ಹೊರಭಾಗದಲ್ಲಿ ಹಾಕಲಾಗಿದ್ದ ಬ್ಯಾನರ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಬ್ಯಾನರ್‌ನಲ್ಲಿ ‘ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ’ ಎಂದು ಬರೆಯಲಾಗಿದೆ. ಅಲ್ಲದೇ ಮೆಡಿಕಲ್ ಕಾಲೇಜು ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್(ಎಸ್‍ಎಚ್‍ಒ) ಹೆಸರನ್ನೂ ಬ್ಯಾನರ್‌ನಲ್ಲಿ ಬರೆಯಲಾಗಿದೆ.
ಈ ಹಿನ್ನೆಲೆ ‘ಆಕ್ಷೇಪಾರ್ಹ ಬ್ಯಾನರ್’ ಹಾಕಿದ್ದ ಕಿಡಿಗೇಡಿಗಳ ವಿರುದ್ಧ ಮೀಟೂಟ್ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಪರಿಣಾಮ ಬ್ಯಾನರ್ ಹಿಡಿದಿದ್ದ ಆರು ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಭು ಪೆಹೆಲ್ವಾನ್ ಅಲಿಯಾಸ್ ಪ್ರಶಾಂತ್ ಕೌಶಿಕ್, ಸಾಗರ್ ಪೋಸ್ವಾಲ್, ಕುಲದೀಪ್ ಮುಸ್ಸೂರಿ, ಅಂಕುರ್ ಚೌಧರಿ, ಅಮಿತ್ ಭದನಾ ಮತ್ತು ಅಮರ್ ಶರ್ಮಾನನ್ನು ಬಂಧಿಸಲಾಗಿದೆ ಎಂದು ಮೀರತ್ ಪೊಲೀಸರು ಟ್ವೀಟ್ ಮಾಡಿದ್ದಾರೆ.