ಹೆತ್ತ ಮಗು ಬೇಡ, ಲವ್ವರ್ ಬೇಕು : ಕ್ಷಣಿಕ ಸುಖದ ಆಸೆಯ ಬೆನ್ನಟ್ಟಿ ಹೋದ ತಾಯಿ ಪೋಣಿಸಿದ ಸುಳ್ಳಿನ ಕಥೆಗೆ ಬಿಗ್ ಟ್ವಿಸ್ಟ್!!!
ಲವ್ವರ್ ಗಾಗಿ ಹೆತ್ತ ಮಗುವೇ ಬೇಡ ಎಂದು ದೂರ ಮಾಡಿ ಸುಳ್ಳಿನ ಸರಮಾಲೆಯನ್ನು ಹೆಣೆದ ತಾಯಿಯ ಕಥೆ ಇದು. ಇನ್ನೊಂದು ಮದುವೆಯಾಗಲು ತನ್ನ ಕರುಳಬಳ್ಳಿಯನ್ನು ದೂರ ಮಾಡಿದ ಮಹಾತಾಯಿ ಈಕೆ.
ಇತ್ತೀಚೆಗೆ ಅಪರಿಚಿತ ಮಹಿಳೆಯೊಬ್ಬಳು ಒಂದೂವರೆ ವರ್ಷದ ಹೆಣ್ಣು ಮಗುವನ್ನು ನನ್ನ ಕೈಯಲ್ಲಿ ಕೊಟ್ಟು ಎಲ್ಲಿಗೆ ಹೋಗಿದ್ದಾಳೆ ಅಂತ ತಿಳಿಯದೇ ಪೊಲೀಸ್ ಠಾಣೆಗೆ ಕೊಟ್ಟ ಯುವಕನ ಕಥೆಗೆ ಈಗ ಇಂಟೆರೆಸ್ಟಿಂಗ್ ಟ್ವಿಸ್ಟ್ ದೊರಕಿದೆ. ರಾಯಚೂರಿನ ಬಸ್ ನಿಲ್ದಾಣದಲ್ಲಿ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಯುವಕ ರಘುವೇ ಈ ಎಲ್ಲಾ ಕಥೆಯ ಸೂತ್ರಧಾರ.
ಈ ಯುವಕ ವಿವಾಹಿತ ಮಹಿಳೆ ಜತೆಗಿನ ಲವ್ವಲ್ಲಿ ಬಿದ್ದಿದ್ದ ಆ ಯುವಕ, ಆಕೆಯ ಮಗುವನ್ನ ದೂರ ಮಾಡಿ ಇಬ್ಬರೂ ಹತ್ತಿರವಾಗಲು ಬಯಸಿದ್ದರು.
ವಿವಾಹಿತ ಮಹಿಳೆಯನ್ನ ಇನ್ಸ್ಟಾಗ್ರಾಮ್ನಲ್ಲಿ ಪರಿಚಯ ಮಾಡಿಕೊಂಡಿದ್ದ ರಘು, ಆಕೆಯನ್ನ ಪ್ರೀತಿಸುತ್ತಿದ್ದ. ಮೊದಲ ಗಂಡನಿಂದ ದೂರವಾಗಿದ್ದ ಮಹಿಳೆ, ಮಗು ಜೊತೆ ರಾಯಚೂರಿನಲ್ಲೇ ವಾಸವಿದ್ದಳು. ಮೈಸೂರಿನ ರಘು ಜತೆಗಿನ ಸ್ನೇಹ ಪ್ರೀತಿಗೆ ತಿರುಗಿ, ಕೆಲ ತಿಂಗಳಿಂದ ಇಬ್ಬರ ನಡುವೆ ಒಡನಾಟ ಬೆಳೆದಿತ್ತು. ಮದುವೆ ಆಗಲು ನಿರ್ಧರಿಸಿದ್ದ ಇಬ್ಬರಿಗೂ ಮಗು ಅಡ್ಡಿಯಾಗಿತ್ತು. ಇದೇ ಕಾರಣಕ್ಕೆ ರಘು ಪೊಲೀಸರ ಮುಂದೆ ಕಥೆ ಕಟ್ಟಿದ್ದ.
ರಘುವಿನ ಕಥೆಯ ಫುಲ್ ಸಾರಾಂಶ ಇಲ್ಲಿದೆ : ನಾನು ಕೆಲಸದ ನಿಮಿತ್ತ ಮೇ 8ರಂದು ರಾಯಚೂರಿಗೆ ತೆರಳಿದ್ದೆ. ರಾಯಚೂರಿನಿಂದ ಮೈಸೂರಿಗೆ ಹಿಂದಿರುಗಲು ಅಂದು ಮಧ್ಯಾಹ್ನ ಬಸ್ ನಿಲ್ದಾಣದಲ್ಲಿದ್ದೆ. ಈ ವೇಳೆ ಮಹಿಳೆಯೊಬ್ಬಳು ನನ್ನ ಬಳಿ ಬಂದು ಶೌಚಗೃಹಕ್ಕೆ ಹೋಗಬೇಕು, 5 ನಿಮಿಷ ಮಗುವನ್ನು ತಗೊಳ್ಳಿ. ವಾಪಸ್ ಬರುವೆ ಎಂದೇಳಿ ಮಗುವನ್ನು ಕೊಟ್ಟು ಹೋದಳು. ಆಕೆ ಎಷ್ಟೊತ್ತಾದರೂ ವಾಪಸ್ ಬಾರಲಿಲ್ಲ. ಇಡೀ ಬಸ್ ನಿಲ್ದಾಣದಲ್ಲಿ ಹುಡುಕಾಡಿದ್ದರೂ ಆಕೆ ಪತ್ತೆಯಾಗಿರಲಿಲ್ಲ. ಬಸ್ ಹೊರಡಲು ಸಿದ್ಧವಾಗಿದ್ದರಿಂದ ಮಗುವನ್ನು ನನ್ನ ಜತೆಯೇ ಮೈಸೂರಿಗೆ ಕರೆತಂದೆ ಎಂದು ಲಷ್ಕರ್ ಪೊಲೀಸ್ ಠಾಣೆಗೆ ಹೋಗಿ ಮರದಿನ ಬೆಳಗ್ಗೆ ಮಗುವನ್ನು ಒಪ್ಪಿಸಿದ್ದ. ಪೊಲೀಸರು ಮಗುವನ್ನು ರಕ್ಷಿಸಿ, ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದರು. ನಂತರ ಮಗುವನ್ನು ಸರ್ಕಾರಿ ಬಾಲ ಮಂದಿರಕ್ಕೆ ಒಪ್ಪಿಸಿದ್ದರು.
ನಂತರ ಈ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಮಗುವಿನ ತಾಯಿಯನ್ನು ಪತ್ತೆ ಹಚ್ಚಿದ್ದ ನಂತರ ಈ ಸುಳ್ಳಿನ ಕಥೆಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ನಿಜ ವಿಷಯ ಏನೆಂದರೆ ರಘುಗೆ ಮಗು ಕೊಟ್ಟಿದ್ದು ಅಪರಚಿತೆಯಲ್ಲ ಈತನ ಪ್ರೇಯಸಿ ಎಂಬುದು ಬಯಲಾಗಿದೆ. ಮಹಿಳೆಯೇ ಸ್ಫೋಟಕ ರಹಸ್ಯ ಬಾಯ್ದಿಟ್ಟಿದ್ದಾಳೆ. ನಮ್ಮಿಬ್ಬರ ಪ್ರೀತಿಗೆ ಮಗು ಅಡ್ಡಿ ಎಂದು ಹೀಗೆಲ್ಲ ಮಾಡಿದೆವು. ಮಗುವನ್ನ ದೂರ ಮಾಡಿಕೊಂಡು ಮದುವೆಯಾಗಲು ಪ್ಲಾನ್ ಮಾಡಿದ್ದೆವು. ಇದೀಗ ಎಲ್ಲವೂ ಗೊತ್ತಾಗಿ ಹೋಗಿದೆ ಎಂದಿದ್ದಾಳೆ. ರಘು ಮತ್ತು ಮಹಿಳೆ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಗುವನ್ನ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.