ನಿಮ್ಮಲ್ಲಿ ಈ ನಾಲ್ಕು ಐಟಮ್ಸ್ ಉಂಟಾ ನೋಡ್ಕೊಳ್ಳಿ, ಇವೆಲ್ಲ ಇದ್ದರೆ ನಿಮಗೆ ಬೇರೆ ಸ್ವರ್ಗ ಬೇಕಿಲ್ಲ !
ಸ್ವರ್ಗ-ನರಕ ಉಂಟ ಅಂತ ಯಾರಿಗೂ ಗೊತ್ತಿಲ್ಲ. ಈ ಹಿಂದೆ ಸತ್ತುಹೋದ ನಮ್ಮ ಆತ್ಮೀಯರು ಕೂಡ ಒಂದು ಬಾರಿ ವಾಪಸ್ಸು ಬಂದು ಕೊನೆಯಪಕ್ಷ ಕಿವಿಯ ಮೂಲೆಯಲ್ಲಿ ಪಿಸುದನಿಯಲ್ಲಿ ಕೂಡ, ಸಾವಿನಾಚೆಯ ಅನುಭವವನ್ನು, ಸ್ವರ್ಗ ಲೋಕದ ವೈಭೋಗಗಳನ್ನು, ನರಕ ಲೋಕದ ಯಾತನೆಗಳನ್ನು ಕನಿಷ್ಟ ಒಂದು ಬಾರಿ ಕೂಡ ಹೇಳಿ ಹೋಗುವ ಔದಾರ್ಯತೆ ತೋರಿಲ್ಲ. ನಮ್ಮನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಅಜ್ಜ-ಅಜ್ಜಿ ಇದೀಗ ಲೋಕದಲ್ಲಿದ್ದರೂ, ಬಹುಶಃ ಯಾಕೋ ಅವರಿಗೆ ನಮ್ಮ ಮೇಲೆ ಮುನಿಸು. ಅಥವಾ ಯಾರಿಗೆ ಗೊತ್ತು ಸ್ವರ್ಗ-ನರಕಗಳಿಂದ ಹೊರಬರದಂತೆ ಆ ಲೋಕದ ಗೇಟುಗಳಿಗೆ ಬಿದ್ದಿರಬಹುದು ದೊಡ್ಡ ಲಾಕ್ !
ಅಷ್ಟಕ್ಕೂ ಈ ಲೇಖನದ ಉದ್ದೇಶ ಮರಣಾನಂತರದ ಸ್ವರ್ಗ-ನರಕ ಲೋಕಗಳ ಇರುವಿಕೆಯ ಬಗ್ಗೆಯಲ್ಲ. ಇವತ್ತಿನ ನಮ್ಮ ಲೌಕಿಕ ಜೀವನದಲ್ಲಿ ಯಾವುದನ್ನು ನಾವು ಸ್ವರ್ಗ ಎನ್ನುತ್ತೇವೆಯೋ ಯಾವ ಕಷ್ಟಗಳನ್ನು ಕಂಡು ಅದನ್ನು ನರಕ ಎನ್ನುತ್ತೇವೆಯೋ ಅಂತಹ ಸ್ವರ್ಗ-ನರಕಗಳ ಬಗ್ಗೆ ಒಂದಿಷ್ಟು ಮಾತು.
ಸಾಮಾನ್ಯವಾಗಿ, ಅರಮನೆಯಂತಹಾ ಮನೆ, ಮನೆಯಲ್ಲಿ ಸಹಾಯಕ್ಕೆ ಆಳುಕಾಳು, ಮನೆಯ ಒಬ್ಬೊಬ್ಬರಿಗೊಂದು ಓಡಾಡಲು ಕಾರು, ಕುಳಿತು ಉಣ್ಣಲು ಸಂಪತ್ತು, ಆತನ ಮನವರಿತು ಕುಲುಕುವ ಪತ್ನಿ – ಇತ್ಯಾದಿ ಇದ್ದರೆ ಆಗ, ‘ ಅವನಿಗೇನಪ್ಪಾ, ಸ್ವರ್ಗ ಸುಖ ಅನುಭವಿಸುತ್ತಿದ್ದಾನೆ’ ಅನ್ನುವುದು ವಾಡಿಕೆ. ಯಾರೋ, ತೀರಾ ಆರ್ಥಿಕವಾಗಿ ಕಷ್ಟದಲ್ಲಿದ್ದರೆ, ಅಂತಹವರಿಗೆ ನರಕದಲ್ಲಿ ಇರುವಂತೆ ಮಾಡಲಾಗುತ್ತೆ ಹೋಲಿಕೆ.
ಅದೊಂದು ವಿಶ್ವ ಪ್ರಸಿದ್ಧ ಜೋಕ್ ಇದೆ. ಅದು ಸ್ವರ್ಗ ಅಂತ ಒಂದಿಷ್ಟು ವಿಷಯಗಳನ್ನು ಪಟ್ಟಿ ಮಾಡಿದೆ. ಅಮೇರಿಕನ್ ಸಂಬಳ, ಚೈನೀಸ್ ಆಹಾರ, ಬ್ರಿಟಿಷ್ ಮನೆ, ಜರ್ಮನ್ ಕಾರು ಮತ್ತು ಭಾರತೀಯ ಹೆಂಡತಿ -ಇವೆಲ್ಲವನ್ನೂ ಪಡೆದವರು ಭೂಲೋಕದ ಸ್ವರ್ಗ ವಾಸಿಗಳಂತೆ. ಅಮೆರಿಕಾ ಅದೆಷ್ಟು ಶ್ರೀಮಂತ ರಾಷ್ಟ್ರ ಅಂದರೆ, ಅಲ್ಲಿನ ಸಂಪತ್ತು ಉಳಿದ ಹೆಚ್ಚಿನ ದೇಶಗಳ ಮಟ್ಟಿಗೆ ಹೇಳೋದಾದರೆ ಅಪರಿಮಿತ. ಅಮೆರಿಕಾದಲ್ಲಿ ಫ್ಯಾಟ್ ಸ್ಯಾಲರಿ ಇದೆ. ಚೀನಾದ ಚೈನೀಸ್ ಆಹಾರ ಯಾರಿಗೆ ತಾನೇ ಇಷ್ಟವಾಗದು ಹೇಳಿ. ಇಷ್ಟವಾಗುವ ಕಾರುಗಳನ್ನು ತಯಾರಿಸುವುದರಲ್ಲಿ ಜರ್ಮನ್ನರನ್ನು ಮೀರಿಸುವವರಿಲ್ಲ. ಇನ್ನುಳಿದ ಈ ವಿಚಾರ ನಮ್ಮ ಭಾರತೀಯ ಹೆಣ್ಣುಮಕ್ಕಳಿಗೆ ಖುಷಿ ಕೊಡುವ ಸಂಗತಿ. ಹೆಂಡತಿರಾಗಲು ಜಗತ್ತಿನಲ್ಲಿಯೇ ಶ್ರೇಷ್ಠ ಹೆಣ್ಣು ಭಾರತೀಯಳಂತೆ. ಕಾರಣ ಆಕೆ ಸಡನ್ನಾಗಿ ಡಂಪ್ ಮಾಡಿ ಹೋಗೋದಿಲ್ಲ. ಆಕೆ ತನ್ನ ತಾಳ್ಮೆಯಿಂದ, ಸಹನೆಯಿಂದ ಮತ್ತು ತನ್ನ ಕುಟುಂಬದ ಎಲ್ಲರ ಹಿತ ಕಾಪಾಡುವ ಕೋ-ಆರ್ಡಿನೇಟರ್ ನ ಕೆಲಸ ಮಾಡುವುದರಿಂದ ಆಕೆ ಎಲ್ಲರಿಗೆ ಇಷ್ಟವಾಗುತ್ತಾಳೆ. ಅದೇ ಕಾರಣಕ್ಕೆ ಭಾರತೀಯ ಹೆಂಡತಿಯರನ್ನು ಪಡೆದವರು ಪುಣ್ಯವಂತರಂತೆ. ಅಮೇರಿಕನ್ ಸ್ಯಾಲರಿ, ಜರ್ಮನ್ ಕಾರು, ಚೈನೀಸ್ ಫುಡ್ಡು ಮತ್ತು ಇಂಡಿಯನ್ ವೈಫ್ ಇದ್ರೆ ಅದೇ ತಾನೇ ಸ್ವರ್ಗ ?!
ಇನ್ನು, ಈ ಸ್ವರ್ಗದ ಕಂಟೆಂಟ್ ಗಳನ್ನು ಒಂದಿಷ್ಟು ಅದಲು ಬದಲು ಮಾಡಿದರೆ, ಅದುವೇ ನರಕ ಆಗತೈತೆ ! ಅಮೇರಿಕನ್ ಆಹಾರ, ಜರ್ಮನ್ ಮನೆ, ಬ್ರಿಟಿಷ್ ಕಾರು, ಭಾರತೀಯ ಸಂಬಳ ಮತ್ತು ಚೈನೀಸ್ ವೈಫ್ !! ಈ ಐಟಮ್ ಸಿಕ್ಕಿದವನಿಗೆ ನರಕಕ್ಕೆ ಸೀದಾ ಎಂಟ್ರಿ ! ಇದು ಜೋಕ್ ಆದರೂ ಅದರಲ್ಲಿ ಆಯಾ ದೇಶದ ಪ್ಲಸ್- ಮೈನಸ್ ವಾಸ್ತವಿಕ ಅಂಶಗಳನ್ನು ನಾವು ಕಾಣಬಹುದು.