ರಾಜ್ಯಾದ್ಯಂತ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ -ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ
ಬೆಂಗಳೂರು: 2022-23ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಪ್ರಾರಂಭವಾಗಿವೆ. ಆದರೆ ಶಾಲೆ ಆರಂಭವಾಗುತ್ತಿದ್ದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶಿಸಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಶಾಲೆಯ ಮುಖ್ಯೋಪಾಧ್ಯಾಯರು, ಶೈಕ್ಷಣಿಕ ಉಸ್ತುವಾರಿ ಅಧಿಕಾರಿ, ಸಿಬ್ಬಂದಿಗಳು, ಈ ಕೆಳಕಂಡ ಮನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ.
• ಶಿಥಿಲಾವಸ್ಥೆಯಲ್ಲಿನ ಕಟ್ಟಗಳಲ್ಲಿ ತರಗತಿ ನಡೆಸದೇ, ಸುಸ್ಥಿತಿಯಲ್ಲಿನ ಕಟ್ಟಡದಲ್ಲಿ ನಡೆಸುವುದು.
• ಮಳೆಯಿಂದಾಗಿ ಮಕ್ಕಳಿಗೆ ಕೆಮ್ಮು, ನೆಗಡಿ, ಜ್ವರ ಹಾಗೂ ಇನ್ನಿತರ ಲಕ್ಷಣ ಕಂಡು ಬಂದ್ರೇ, ಕೋವಿಡ್-19 ಮುಂಜಾಗ್ರತಾ ಕ್ರಮ ಕೈಗೊಳ್ಳುವುದು.
• ಮಳೆಯಿಂದಾಗಿ ನೆರೆ ಉಂಟಾದಾಗ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಿ, ನೀರು ಹೊರ ಹಾಕಿಸುವುದು.
• ಮಳೆಯಿಂದಾಗಿ ಶಾಲಾ ಆವರಣ ಜಲಾವೃತಗೊಂಡರೇ, ಶಾಲಾ ಮುಖ್ಯೋಪಾಧ್ಯಾಯರು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಜಿಲ್ಲಾ ಉಪನಿರ್ದೇಶಕರ ಪೂರ್ವಾನುಮತಿ ಪಡೆದು, ಶಾಲೆಗೆ ರಜೆ ಘೋಷಿಸುವುದು.
• ಶಾಲೆಗೆ ರಜೆ ಘೋಷಿಸಿದಂತ ದಿನಗಳಲ್ಲಿನ ಪಾಠ-ಪ್ರವಚನಗಳನ್ನು ಮುಂದಿನ ಸರ್ಕಾರಿ ರಜಾ ದಿನಗಳಲ್ಲಿ ಸರಿದೂಗಿಸುವುದು.
ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಗತ್ಯವಿದ್ದಲ್ಲಿ, ಸ್ಥಳೀಯ ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳ ಮತ್ತು ತಾಲೂಕು, ಜಿಲ್ಲಾಡಳಿತದ ಸಹಕಾರದೊಂದಿಗೆ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳುವುದು. ಮಳೆಯಿಂದಾಗಿ ಯಾವುದೇ ವಿದ್ಯಾರ್ಥಿ, ಶಾಲೆಯಲ್ಲಿ, ಶಾಲಾ ಆವರಣದಲ್ಲಿ ತೊಂದರೆ, ಜೀವ ಹಾನಿ ಆಗದಂತೆ ಅಗತ್ಯ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.