ಶಾಲಾ ಮಕ್ಕಳ ಕ್ಷೀರ ಭಾಗ್ಯದ ಪ್ಯಾಕೆಟ್ ರಸ್ತೆ ಬದಿಯ ತ್ಯಾಜ್ಯದಲ್ಲಿ ಪತ್ತೆ!! ಮಕ್ಕಳಿಗೆ ನೀಡದೆ ರಸ್ತೆ ಬದಿ ಎಸೆದವರು ಯಾರು ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಸಿಗಬೇಕಿದೆ ಉತ್ತರ
ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಬೇಂಗಮಲೆ ಎಂಬಲ್ಲಿ ರಸ್ತೆಬದಿಯ ತ್ಯಾಜ್ಯ ರಾಶಿಯೊಂದಿಗೆ ಶಾಲಾ ಮಕ್ಕಳಿಗೆ ನೀಡುವ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪ್ಯಾಕೆಟ್ ಗಳನ್ನೂ ಎಸೆದಿರುವುದು ಕಂಡುಬಂದಿದೆ.
ಬೇಂಗಮಲೆಯಲ್ಲಿ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾಗ ಈ ವಿಚಾರ ಗಮನಕ್ಕೆ ಬಂದಿದ್ದು, ಸದ್ಯ ಈ ಬಗ್ಗೆ ಶಾಲಾ ಮಕ್ಕಳ ಪೋಷಕರೊಳಗೆ ಅನುಮಾನದ ಚರ್ಚೆಗಳು ಎದ್ದಿವೆ.
ಈ ಮೊದಲು ಕೂಡಾ ಇಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ದಂಡ ವಿಧಿಸಿ ಕ್ರಮ ಕೈಗೊಂಡಿದ್ದರೂ ಕಿಡಿಗೇಡಿಗಳು ಮತ್ತದೇ ಚಾಳಿಯನ್ನು ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗ ತೆರಳಿದ್ದಾಗ ಗಮನಕ್ಕೆ ಬಂದ ವಿಚಾರ ಸದ್ಯ ಎಲ್ಲೆಡೆ ಸುದ್ದಿಯಾಗಿದ್ದು, ಸರ್ಕಾರ ಶಾಲಾ ಮಕ್ಕಳಿಗೆ ನೀಡಿದ್ದ ಹಾಲಿನ ಪ್ಯಾಕೆಟ್ ಮಕ್ಕಳಿಗೆ ನೀಡದೆ ರಸ್ತೆ ಬದಿಯಲ್ಲಿ ಎಸೆಯಲಾಗಿದೆಯೇ ಎನ್ನುವ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರಿಸಬೇಕಾಗಿದೆ ಎನ್ನುವುದು ಪೋಷಕರ-ಸಾರ್ವಜನಿಕರ ಆಗ್ರಹವಾಗಿದೆ.