ಭಾರತದಲ್ಲಿ ಶೇ. 50ರಷ್ಟು ಪ್ರವಾಸೋದ್ಯಮ ಕ್ಷೇತ್ರಗಳು ಹೆಚ್ಚಲು ಮೊಘಲರೇ ಕಾರಣ !! – ಮುಫ್ತಿ ಅಚ್ಚರಿಯ ಮಾತು
ದೇಶದಲ್ಲಿ ಇದೀಗ ಜ್ಞಾನವಾಪಿ ಮಸೀದಿಯ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಮೊಘಲ್ ದೊರೆ ಔರಂಗಜೇಬ್ ಆಳ್ವಿಕೆಯಲ್ಲಿ ದೇವಾಲಯವನ್ನು ಕೆಡವಿ ಮಸೀದಿಯನ್ನು ಕಟ್ಟಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದರ ನಡುವೆ ಭಾರತದಲ್ಲಿ ಶೇ.50ರಷ್ಟು ಪ್ರವಾಸೋದ್ಯಮ ಕ್ಷೇತ್ರಗಳು ಹೆಚ್ಚಲು ಮೊಘಲರೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಔರಂಗಜೇಬ್ ಆಳ್ವಿಕೆಯಲ್ಲಿ ದೇವಾಲಯಗಳು ನಾಶವಾದವು ಎಂಬ ಚರ್ಚೆಯ ಕುರಿತು ಪ್ರತಿಕ್ರಿಯಿಸಿದರು. ಮೊಘಲರಿಂದಲೇ ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರಗಳು ಹೆಚ್ಚಿದೆ. ಭಾರತದ ಪ್ರವಾಸೋದ್ಯಮ ಕ್ಷೇತ್ರವನ್ನು ನಾಶ ಮಾಡಲು ಬಿಜೆಪಿ ಬಯಸಿದೆ. ಇದರಿಂದಾಗಿ ಅವರು ಎಲ್ಲಾ ಮಸೀದಿಗಳ ಹಿಂದೆ ಬಿದ್ದಿದ್ದು, ಇದೀಗ ಜ್ಞಾನವಾಪಿ ಮಸೀದಿಯ ಹಿಂದೆ ಬಿದ್ದಿದ್ದಾರೆ. ನಾವು ಎಲ್ಲಿ ಪೂಜಿಸುತ್ತೇವೆಯೋ ಅಲ್ಲಿ ನಮ್ಮ ದೇವರು ಇದ್ದಾನೆ. ನೀವು ನೋಡುತ್ತಿರುವ ಎಲ್ಲಾ ಮಸೀದಿಗಳ ಪಟ್ಟಿಯನ್ನು ನಮಗೆ ನೀಡಿ ಎಂದು ಒತ್ತಾಯಿಸಿದರು.
ಇದೇ ವೇಳೆ ವಿವೇಕ್ ಅಗ್ನಿಹೋತ್ರಿಯವರ ದಿ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಟೀಕಿಸಿದ ಅವರು, ಇತ್ತೀಚೆಗೆ ಕಾಶ್ಮೀರದಲ್ಲಿ ಕಾಶ್ಮೀರ ಪಂಡಿತರನ್ನು ಗುರಿಯಾಗಿಸಿಕೊಂಡಿರುವ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರ ಬಿಡುಗಡೆಯಾದ ನಂತರ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷ ಹೆಚ್ಚಿದೆ. ಅವರು ನೈಜ ಸಮಸ್ಯೆಗಳಿಂದ ದೂರವಿರಲು ಈ ಹಿಂದೂ, ಮುಸ್ಲಿಂ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.