ದತ್ತಪೀಠದಲ್ಲಿ ಉಲ್ಲಂಘನೆಯಾಯಿತೇ ಕೋರ್ಟ್ ಆದೇಶ!?? | ಹೋಮ ನಡೆಯುವ ಸ್ಥಳದಲ್ಲಿ ಮಾಂಸ-ಮುದ್ದೆ ತಿಂದ ಕಿಡಿಗೇಡಿಗಳು ಯಾರು!??
ಚಿಕ್ಕಮಗಳೂರಿನ ವಿವಾದಿತ ಜಾಗ ದತ್ತಪೀಠದಲ್ಲಿ ಕೋರ್ಟ್ ಆದೇಶ ಉಲ್ಲಂಘನೆಯಾಗಿದ್ದು, ಹೋಮ-ಹವನ ನಡೆಯುವ ಸ್ಥಳದಲ್ಲಿ ಮಾಂಸಹಾರ ಸೇವನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಅಗುತ್ತಿದೆ.
ದತ್ತಪೀಠದಲ್ಲಿ ಇದೀಗ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹೋಮ ಹವನ ನಡೆಯುವ ಸ್ಥಳದಲ್ಲಿ ಮಾಂಸಹಾರ ಸೇವನೆ ನಡೆದಿದೆ. ಗೋರಿ ಪೂಜೆ ಮಾಡಿರುವ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಾಂಸಾಹಾರ ಮಾಡಿದ ವಿಚಾರ ಸಂಬಂಧ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ದತ್ತಪೀಠದಲ್ಲಿ ಮಾಂಸಹಾರ ಸೇವನೆ ವಿಚಾರ ನಿನ್ನೆ ರಾತ್ರಿ ನನ್ನ ಗಮನಕ್ಕೆ ಬಂದಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಯಾರ ಕುಮ್ಮಕ್ಕು ಇದ್ದರು ಕೂಡ ಅಲ್ಲಿ ಆ ರೀತಿ ಆಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಇದನ್ನು ನಿಯಂತ್ರಿಸಬೇಕಾಗಿದ್ದವರು ಉತ್ತರಿಸಬೇಕಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಜಿಲ್ಲಾಧಿಕಾರಿಯವರು ಘಟನೆ ಸಂಬಂಧ ತನಿಖೆ ನಡೆಸಲು ಸೂಚಿಸಿದ್ದಾರೆ. ಅಲ್ಲಿನ ಜವಾಬ್ದಾರಿ ಯಾರಿಗೆ ನೀಡಲಾಗಿತ್ತೋ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದರು.
ದತ್ತಪೀಠದ 300 ಮೀಟರ್ ವ್ಯಾಪ್ತಿಯಲ್ಲಿ ಮಾಂಸಹಾರ, ಪ್ರಾಣಿ ಬಲಿಗೆ ನಿಷೇಧ ಹೇರಲಾಗಿದೆ. ಆದರು ಕೂಡ ಅಲ್ಲಿ ಪ್ರಾಣಿಬಲಿ ನಡೆದಿದೆ. ಅಲ್ಲಿ ಹೇಗೆ ಮಾಂಸಹಾರ ಸೇವನೆ ಮಾಡಿದ್ದಾರೆ ಎಂಬ ವಿಚಾರ ತನಿಖೆಯಾಗಬೇಕು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.