ಹಿಂದೂ ಯುವಕ- ಮುಸ್ಲಿಂ ಯುವತಿ ಲವ್ ಸ್ಟೋರಿ | ಮದುವೆಯಾಗಿ ಪೊಲೀಸ್ ಠಾಣೆ ಮೊರೆ ಹೋದ ಜೋಡಿ| ಠಾಣೆ ಮುಂದೆ ಎರಡು ದಿನ ನಡೆಯಿತು ಹೈಡ್ರಾಮ!
ಹಿಂದೂ ಹುಡುಗ ಮತ್ತು ಮುಸ್ಲಿಂ ಯುವತಿ ಇಬ್ಬರೂ ಪರಸ್ಪರ ಒಂದು ವರ್ಷದಿಂದ ಗಾಢ ಪ್ರೀತಿಯಲ್ಲಿದ್ದು, 5 ದಿನದ ಹಿಂದೆ ಮನೆ ಬಿಟ್ಟು ಹೋಗಿ ಮದುವೆ ಆಗಿದ್ದಾರೆ. ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಮಗೆ ರಕ್ಷಣೆ ನೀಡಬೇಕೆಂದು ಹೇಳಿದ್ದಾರೆ. ಇತ್ತ ಕಡೆ ಯುವಕ ಯುವತಿಯ ಮನೆಯವರು ಪೊಲೀಸ್ ಠಾಣೆಗೆ ಬಂದಿದ್ದಾರೆ.
ಅನಂತರ ಶುರುವಾಯಿತು ನೋಡಿ, ಮಾತಿಗೆ ಮಾತು…ಜಗಳ…ನಿನ್ನೆ ಶುರುವಾದ ಈ ಗಲಾಟೆ ಇವತ್ತಿನವರೆಗೂ ಮುಂದಿದೆ.
ಕನಕಗಿರಿ ಪಟ್ಟಣದ 21 ವರ್ಷದ ದಿಲ್ ಶಾದ್ ಬೆಗಂ ಮತ್ತು 22 ವರ್ಷದ ಕನಕರೆಡ್ಡಿ ಪ್ರೇಮ ವಿವಾಹ ಪ್ರಕರಣ ನಿನ್ನೆಯಿಂದ ದಿನಕ್ಕೊಂದು ಹೈಡ್ರಾಮಾ ಸೃಷ್ಠಿ ಮಾಡಿತು.
ನಿನ್ನೆ ರಾತ್ರಿಯಿಡೀ ಯುವತಿ ಪೋಷಕರು ಯುವತಿಯ ಮನವೊಲಿಕೆಗೆ ಯತ್ನಿಸಿ, ವಿಫಲರಾಗಿದ್ದಾರೆ. ಮಾತು ಕೇಳದ ಜೋಡಿಗೆ ಪೊಲೀಸರು ಕೊನೆಗೆ ಜೋಡಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲು ಮುಂದಾದರು. ಆದರೆ ಕೂಡಲೇ ಮಧ್ಯಪ್ರವೇಶಿಸಿದ ಯುವಕನ ಕಡೆಯವರು ಇಬ್ಬರೂ ವಯಸ್ಕರಾಗಿದ್ದು, ಸಾಂತ್ವನ ಕೇಂದ್ರಕ್ಕೆ ಕಳುಹಿಸಬೇಡಿ ಎಂದು ಅಡ್ಡಿ ಮಾಡಿದರು. ಆದರೂ ಪೊಲೀಸರು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಆದರೆ ಪಟ್ಟು ಬಿಡದ ಕುಟುಂಬದ ಸದಸ್ಯರು ಸಾಂತ್ವನ ಕೇಂದ್ರದ ಮುಂದೆಯೇ ಯುವಕನ ಕಡೆಯವರು ಅಡುಗೆ ಮಾಡಿಕೊಂಡು, ಊಟ ಮಾಡಿ ಜಾಗರಣೆ ಮಾಡಿದರು.
ಆದರೆ ಈ ಪ್ರೇಮ ವಿವಾಹದ ಹೈಡ್ರಾಮ ಇಂದು ಕೂಡಾ ಮುಂದುವರಿಯಿತು. ಇಂದು ಕೂಡ ಯುವತಿಯ ಕುಟುಂಬದವರು ಸಾಕಷ್ಟು ಬಾರಿ ಆಕೆಯನ್ನು ಮನವೊಲಿಸಿ, ಮನೆಗೆ ಕರೆದೊಯ್ಯುಲು ಪ್ರಯತ್ನಿಸಿದರು. ಯುವತಿಯ ಮನವೊಲಿಸಲು ಆಕೆಯ ಕುಟುಂಬಕ್ಕೆ ಪೊಲೀಸರು ಪದೇ ಪದೇ ಅವಕಾಶ ನೀಡಿದ್ದರಿಂದ ಯುವಕನ ಕಡೆಯ ಗುಂಪು ಆಕ್ಷೇಪ ವ್ಯಕ್ತಪಡಿಸಿತು. ಇದರಿಂದ ಪೊಲೀಸರು ಸದ್ದಿಲ್ಲದೇ ಯುವತಿ ಕುಟುಂಬ ಜೊತೆಗೆ ನವಜೋಡಿಯನ್ನು ಕನಕಗಿರಿ ಪೊಲೀಸ್ ಠಾಣೆಯಿಂದ ತಾವರಗೆರೆ ಪೊಲೀಸ್ ಠಾಣೆಗೆ ಸ್ಥಳಾಂತರಿಸಲು ಮುಂದಾದರು. ಆಗಲೂ ಯುವಕನ ಕಡೆಯ ಹುಡುಗರು ಪೊಲೀಸ್ ವಾಹನ ಹಿಂಬಾಲಿಸಿದರು. ನಡು ರಸ್ತೆಯಲ್ಲೇ ವಾಹನ ನಿಲ್ಲಿಸಿ, ನಮಗೂ ಅವರ ಜತೆಗೆ ಬರಲು ಅವಕಾಶ ನೀಡಬೇಕೆಂದು ಕೇಳಿಕೊಂಡರು. ಪೊಲೀಸ್ ವಾಹನದ ಹಿಂದೆ ಬರುತ್ತಿದ್ದ ಪೊಲೀಸರು ಅವರ ಮನವೊಲಿಸಿ ಕೊನೆಗೂ ತಾವರಗೇರ ಠಾಣೆಗೆ ಕರೆತಂದರು. ಯುವತಿ ಕುಟುಂಬದ ಕೊನೆ ಪ್ರಯತ್ನ ಎಂದು ಯುವತಿ ಮುಂದೆ ಕಣ್ಣೀರಿಟ್ಟು ಅಂಗಲಾಚಿದರೂ ಯುವತಿ ಹೆತ್ತವರ ಜೊತೆ ಹೋಗಲು ಮನಸ್ಸು ಮಾಡಲಿಲ್ಲ. ಕಣ್ಣೀರಾಕಿಕೊಂಡೇ ಅವರು ಮನೆಗೆ ಹೋಗಿದ್ದಾರೆ.
ನಿನ್ನೆ ಸಂಜೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಶುರುವಾದ ಅನ್ಯಕೋಮಿನ ಜೋಡಿಯ ಮದುವೆ ಪ್ರಹಸನ ಇಂದು ತಾವರಗೇರ ಪೊಲೀಸ್ ಠಾಣೆಯಲ್ಲಿ ಸುಖಾಂತ್ಯ ಕಂಡಿತು.