ದೇಶದಲ್ಲಿ ಸರಕಾರಿ ಶಾಲೆಗಳ ಗಣನೀಯ ಇಳಿಕೆ ! ರಾಜ್ಯದಲ್ಲಿ ಎಷ್ಟು ಸರಕಾರಿ ಶಾಲೆಗಳಿಗೆ ಬೀಳಲಿದೆ ಬೀಗ?
ದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಇತ್ತೀಚಿನ ದಿನಗಳಲ್ಲಿ ಅಂದರೆ ಕಳೆದ ಎರಡು ಮೂರು ವರ್ಷದಿಂದ
ಶಾಶ್ವತವಾಗಿ ಮುಚ್ಚಲಾಗುತ್ತಿದೆ. UDISE ವರದಿ 2018- 19 ಪ್ರಕಾರ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆಯಂತೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಖಾಸಗಿ ಶಾಲೆಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ.
ಕೋವಿಡ್ ಸಮಯದಲ್ಲಿ ಅಂದರೆ ಕಳೆದ ಎರಡು ವರ್ಷಗಳಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲೇ ಹೆಚ್ಚಿನ ದಾಖಲಾತಿ ನಡೆದಿವೆಯಂತೆ. ಇದಕ್ಕೆ ಕಾರಣ ಏನೆಂದರೆ, ಆ ಸಮಯದಲ್ಲಿ ಅನೇಕ ಪೋಷಕರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಇದರಿಂದಾಗಿ ಅವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಬದಲಿಗೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಮಾಡಿಸಿದರು.
2018-19ರ UDISE ವರದಿಯ ಪ್ರಕಾರ, ದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಈ ವರದಿಯ ಪ್ರಕಾರ 2018-19 ರಲ್ಲಿ 1,083,678 ಸರ್ಕಾರಿ ಶಾಲೆಗಳಿದ್ದವು. ಆದರೆ 2019-20 ರಲ್ಲಿ 1,032,570 ಕ್ಕೆ ಇಳಿದಿದೆ. ಅಂದರೆ ಸುಮಾರು 51,108 ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲಾಗಿತ್ತು.
ಇನ್ನೂ ಉತ್ತರ ಪ್ರದೇಶದಲ್ಲಿ ಕೂಡ ಸಾವಿರಾರು ಸರ್ಕಾರಿ ಶಾಲೆಗಳನ್ನ ಮುಚ್ಚಲಾಗಿದೆ. 2018 ರಲ್ಲಿ 163,142 ಸರ್ಕಾರಿ ಶಾಲೆಗಳಿದ್ದವು. ಆದರೆ 2020 ರಲ್ಲಿ ಶಾಲೆಗಳ ಸಂಖ್ಯೆ 137,068 ಕ್ಕೆ ಇಳಿದಿತ್ತು. ಅಂದರೆ ಬರೋಬ್ಬರಿ 26,074 ಸರ್ಕಾರಿ ಶಾಲೆಗಳನ್ನ ಮುಚ್ಚಲಾಗಿತ್ತು. ಮಧ್ಯಪ್ರದೇಶದಲ್ಲಿ ಕೂಡ 22,904 ಸರ್ಕಾರಿ ಶಾಲೆಗಳಿಗೆ ಶಾಶ್ವತವಾಗಿ ಬೀಗ ಹಾಕಲಾಗಿದೆ.
UDISE ವರದಿಯ ಪ್ರಕಾರ, ಆಶ್ಚರ್ಯಕರ ಸಂಗತಿ ಏನೆಂದರೆ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಶಾಲೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅಂತೆ. ಇದೊಂದು ಅದ್ಭುತ ಬೆಳವಣಿಗೆ ಅಂತಾನೇ ಹೇಳಬಹುದು. ಅಂಕಿ ಅಂಶಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 2018-19 ರಲ್ಲಿ 82,876 ಸರ್ಕಾರಿ ಶಾಲೆಗಳಿದ್ದವು, ಆದರೆ 2020 – 21 ರಲ್ಲಿ ಆ ಶಾಲೆಗಳ ಸಂಖ್ಯೆ 83,379 ಕ್ಕೆ ಏರಿಕೆಯಾಗಿದೆ. ಅದೇ ರೀತಿ ಬಿಹಾರದಲ್ಲೂ ಕೂಡಾ 2018 -19 ರಲ್ಲಿ 72,590 ಇದ್ದ ಸರ್ಕಾರಿ ಶಾಲೆಗಳು, 2020-21 ರಲ್ಲಿ 75,555 ಕ್ಕೆ ಏರಿಕೆಯಾಗಿವೆ.
ಇನ್ನೂ ಕರ್ನಾಟಕದ ಕಡೆ ಬಂದರೆ, 2018-19 ರಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು 28,847 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಅಂದಿನ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಯೊಂದನ್ನು ನೀಡಿದ್ದರು.
ಅಂಕಿ ಅಂಶಗಳ ಪ್ರಕಾರ, 50,000 ಶಾಲೆಗಳು ರಾಜ್ಯದಲ್ಲಿದೆ. ಅದರಲ್ಲಿ48,000 ಸರ್ಕಾರಿ ಶಾಲೆಗಳು ಮತ್ತು 2,000 ಖಾಸಗಿ ಶಾಲೆಗಳಿವೆ. ಅಂದಾಜು ಸುಮಾರು ಒಂದು ಕೋಟಿ ಮಕ್ಕಳು ಶಾಲೆ ಕಲಿಯುತ್ತಿದ್ದು, ಸುಮಾರು ಎರಡು ಲಕ್ಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಮುಂದಿನ ಎರಡು ಮೂರು ವರ್ಷಗಳಲ್ಲಿ ಸುಮಾರು 2,400 ಸರ್ಕಾರಿ ಶಾಲೆಗಳು ಮುಚ್ಚಬಹುದು ಎನ್ನಲಾಗುತ್ತಿದೆ.