SSLC ಫಲಿತಾಂಶ ಮೇ.19 ಕ್ಕೆ?
ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಎಕ್ಸಾಂ ಈಗಾಗಲೇ ಮುಕ್ತಾಯಗೊಂಡಿದೆ. ಇದರ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಯುತ್ತಿದ್ದಾರೆ. ಮಾರ್ಚ್ 28 ರಿಂದ ಎಪ್ರಿಲ್ 11, 2022 ರವರೆಗೆ ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಮೇ 15 ರಂದು ಪ್ರಕಟಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಲ್ಲಾ ತಯಾರಿ ನಡೆಸಿತ್ತು. ಆದರೆ ಸಾಲು ಸಾಲು ರಜೆಗಳು ಬಂದ ಕಾರಣ, ಮೌಲ್ಯಮಾಪನ ಕೊಂಚ ವಿಳಂಭವಾಗಿದೆ. ಈಗ ಮೌಲ್ಯ ಮಾಪನ ಪ್ರಕ್ರಿಯೆ ಕೂಡಾ ಮುಗಿಯುತ್ತಾ ಬಂದಿದೆ. ಆದರೆ ಮೌಲ್ಯ ಮಾಪನದಲ್ಲಿ ಸಣ್ಣಪುಟ್ಟ ಕೆಲವು ದೋಷಗಳಿದ್ದಲ್ಲಿ ಅವುಗಳನ್ನು ಸರಿಪಡಿಸುವ ಕಾರ್ಯ ನಡೆಸಲಾಗುತ್ತಿದೆ. ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ನಂತರ ಅಂಕಗಳ ದಾಖಲೀಕರಣ ಪೂರ್ಣಗೊಳಿಸಿ ಮೇ.19 ಕ್ಕೆ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಇನ್ನು ಫಲಿತಾಂಶ ಯಾವಾಗ ಪ್ರಕಟಿಸಬೇಕು ಎನ್ನುವುದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರೊಂದಿಗೆ ಚರ್ಚಿಸಿ ದಿನಾಂಕ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಾರಿ ಒಂದು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಪರೀಕ್ಷಾ ಅಕ್ರಮ ವರದಿಯಾಗಿತ್ತು, ಈ ಸಂಬಂಧ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ. ಈ ಬಾರಿ ಮೊದಲ ಬಾರಿ ಪರೀಕ್ಷೆ ಬರೆದವರ ಪೈಕಿ ಹಾಜರಾತಿ ಪ್ರಮಾಣ ಶೇ.98ಕ್ಕಿಂತ ಹೆಚ್ಚು ಇತ್ತು. ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಗೈರು ಹಾಜರಾತಿ ಪ್ರಮಾಣ ಎಂದಿನಂತೆ ಸಾಮಾನ್ಯವಾಗಿತ್ತು.