ಮಂಗಳೂರು ರಕ್ತಸಿಕ್ತ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ ಬೋಳಾರದ ತ್ರಿವಳಿ ಕೊಲೆ!! ಮಟಮಟ ಮಧ್ಯಾಹ್ನ ಮಗುವಿನ ಕಣ್ಣ ಮುಂದೆಯೇ ಹರಿಯಿತು ಅಪ್ಪನ ರಕ್ತ!!
ಅಂದು ಸುಡುಬಿಸಿಲ ಮಧ್ಯಾಹ್ನ. ಪ್ರಶಾಂತವಾಗಿದ್ದ ಮಂಗಳೂರು ನಗರದ ಬೋಳಾರ ಪರಿಸರದಲ್ಲಿ ನೋಡನೋಡುತ್ತಿದ್ದಂತೆ ದಭಾ ಧಬಾ ಓಡಿದ ಸದ್ದು. ಹಿಂದೆ ಯಾರೋ ಅಟ್ಟಿಸಿಕೊಂಡು ಓಡಿದ ಸಪ್ಪಳ. ಅಲ್ಲಿ ಹಾಗೆ ಮೂವರನ್ನು ಅಟ್ಟಾಡಿಸಿ ಕೊಚ್ಚಿ ಬರ್ಬರವಾಗಿ ಕೊಲೆಗೈದ ಸುದ್ದಿ ಅರೆಕ್ಷಣದಲ್ಲೇ ಇಡೀ ಜಿಲ್ಲೆಯನ್ನು ಹಬ್ಬಿತ್ತು. ಮಂಗಳೂರು ನಗರ ಬೆಚ್ಚಿ ಬಿದ್ದಿತ್ತು, ಜತೆಗೆ ಅಲ್ಲಿನ ರಕ್ತದ ವಾಸನೆ ಮುಂಬೈ ಅಂಡರ್ ವರ್ಲ್ಡ್ ನ ಮೂಗಿಗೂ ಬಡಿದಿತ್ತು. ಈ ಘಟನೆ ನಡೆದು 17 ವರ್ಷಗಳೇ ಕಳೆದು ಹೋಗಿವೆ. ಆದರೂ 2004ರಲ್ಲಿ ನಡೆದ ಅದೊಂದು ಕೊಲೆಯ ಭೀಕರತೆಯನ್ನು ಬೋಳಾರ ಪರಿಸರದ ಜನತೆ ಇಂದಿಗೂ ನೆನೆಸಿಕೊಳ್ಳುತ್ತಿರುವುದು ಮಾತ್ರ ವಾಸ್ತವ.
ಅಂದು ಅಲ್ಲಿ ಕೊಲೆಯಾಗಿದ್ದು ಇಬ್ಬರು ಸಹೋದರರು ಹಾಗೂ ಅವರ ಓರ್ವ ಸ್ನೇಹಿತ. ಕೆಲವೊಂದು ಪ್ರಕರಣಗಳಲ್ಲಿ ಸಣ್ಣ ಪುಟ್ಟ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ ಸುರೇಶ್ ರೈ, ಉಮೇಶ್ ರೈ ಹಾಗೂ ಅವರ ಸ್ನೇಹಿತ ನಾಗೇಶ್ ರೈ ಎಂಬವರನ್ನು ಅಟ್ಟಾಡಿಸಿ ಕೊಲೆ ನಡೆಸಿದ್ದು ಮಾತ್ರ ರೌಡಿಶೀಟರ್ಗಳಲ್ಲದ ಸಣ್ಣ ಪ್ರಾಯದ ಯುವಕರು. ಹೀಗೇ ಸಣ್ಣಪುಟ್ಟ ಗಲಾಟೆಗಳಲ್ಲಿ ಪಾಲು ಪಡೆಯುತ್ತಾ ಪಾತಕ ಲೋಕಕ್ಕೇ ಎಂಟ್ರಿಯಾಗಲು ಈ ತ್ರಿವಳಿ ಕೊಲೆಯೇ ಕಾರಣವಾಯಿತು ಎಂದರೆ ತಪ್ಪಾಗದು. ಘಟನೆ ನಡೆದು ಕೆಲ ಹೊತ್ತಿನಲ್ಲಿ ಮಂಗಳೂರು ಬೆಚ್ಚಿಬಿದ್ದಿದ್ದು, ಠಾಣೆಯಲ್ಲಿ ದಾಖಲಾಗಿದ್ದ ದೂರಿನಲ್ಲಿ ಉಲ್ಲೇಖವಾಗಿರುವ ಎಲ್ಲಾ ಆರೋಪಿತರನ್ನು ಪೊಲೀಸರು ಠಾಣೆಗೆ ಕರೆಸಿಕೊಂಡಿದ್ದರು.
ಕೊಲೆ ನಡೆಸುವ ಹಂತಕ್ಕೆ ಜಿದ್ದು ಪ್ರಾರಂಭವಾಗಲು ಕಾರಣವೇನು!?
ಆ ಕಾಲದಲ್ಲಿ ಅಂಡರ್ ವರ್ಲ್ಡ್ ನಲ್ಲಿ ಹೆಸರುಮಾಡಿದ್ದ ಡಾನ್ ಸಾಧು ಶೆಟ್ಟಿಯ ಸಹಚರರಾದ ಬೋಳಾರದ ಚೇತು, ಹರೀಶ್ ಮತ್ತಿರರು ಆ ಸಮಯದಲ್ಲಿ ಬೋಳಾರದಲ್ಲಿ ಒಂದು ಮಟ್ಟಿನ ಹವಾ ಕ್ರಿಯೇಟ್ ಮಾಡಿದ್ದರು. ಆಗ ಸಾಧು ಶೆಟ್ಟಿ ದಕ್ಷಿಣ ಕನ್ನಡ ದಲ್ಲಿ ಸಂಜೆ ಕ್ರಿಕೆಟ್ ಆಡುತ್ತಾ, ದಾನ ಪರೋಪಕಾರ ಮಾಡುತ್ತಾ ಹಾಯಾಗಿದ್ದರು. ಕೈಯಲ್ಲಿ ಮುಂಬಯಿ ಬಿಡುವಾಗ ತಂದಿದ್ದ ದುಡ್ಡು ಬೇಕಾದಷ್ಟು ಇತ್ತು. ಅದೇನೂ ದುರಾದೃಷ್ಟವೋ ಗೊತ್ತಿಲ್ಲ: ಸಾಧು ಮುಂಬೈ ಗೆ ಒಮ್ಮೆ ಹೋಗಿ ಬರೋಣ ಅಂತ ಹೊರಟಿದ್ದ. ಆ ಸುದ್ದಿ ತಿಳಿದ ಮುಂಬೈನ ವಿಜಯ್ ಸಲಸ್ಕರ್ ಎಂಬ ಪೊಲೀಸು ಅಧಿಕಾರಿ ಹೊಂಚು ಹಾಕಿ ಕೂತಿದ್ದ. ಅಲ್ಲಿ ಸಾಧು ಶೆಟ್ಟಿಯ ಎನ್ಕೌಂಟರ್ ನಡೆದೇ ಹೋಗಿತ್ತು. ( ಈ ವಿಜಯ್ ಸಲಾಸ್ಕರ್ ನನ್ನು ತಾಜ್ ಹೋಟೆಲಿನಲ್ಲಿ ಉಗ್ರಗಾಮಿಗಳು ಗುಂಡು ಹಾರಿಸಿ ಕೊಂದರು ಆಮೇಲೆ!)
ಯಾವಾಗ ಸಾಧು ಶೆಟ್ಟಿ ನೋ ಮೋರ್ ಎನ್ನುವ ಸುದ್ಧಿ ತಿಳಿದ ಕೂಡಲೇ ಚೇತು ಹಾಗೂ ಕೆಲವರು ಮುಂಬೈಗೆ ತೆರಳಿದ್ದು, ಹರೀಶ ಮಾತ್ರ ಬೋಳಾರದಲ್ಲೇ ಉಳಿದುಕೊಂಡಿದ್ದ. ಈ ವೇಳೆ ಸುರೇಶ್ ರೈ ಹಾಗೂ ಮತ್ತಿತರರು ಹರೀಶನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದು, ಬಳಿಕ ಪ್ರಕರಣವು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ರಾಜಿಸಂಧಾನವಾಗಿತ್ತು.
ಆದರೂ ದ್ವೇಷದ ಕಿಡಿ ಸಣ್ಣ ಮಟ್ಟಿನಲ್ಲಿ ಹಾಗೇ ಆರದೆ ಉಳಿದಿದ್ದು, ಅದಾಗಲೇ ಸುರೇಶ್ ರೈ ಹಾಗೂ ಆತನ ಸಹೋದರನ ಹತ್ಯೆ ನಡೆಸಲು ಇನ್ನೊಂದು ತಂಡ ತಯಾರಾಗಿತ್ತು. ಹೀಗೆ ತಯಾರಾದ ತಂಡದಲ್ಲಿದ್ದವರೇ ಬೋಳಾರದ ಚೇತು ಹಾಗೂ ಹರೀಶನ ತಮ್ಮಂದಿರಾದ ರಾಮಾನಂದ್ ಬೋಳಾರ, ಸುಜಿತ್ ಯಾನೇ ಕಕ್ಕೆ, ಸುಧೀರ್ ಶೆಟ್ಟಿ, ಕಣ್ಣ ಯಾನೇ ಲತೀಶ್ ಹಾಗೂ ಅರುಣ್. ಅಂತೂ ಕೊಲೆಗೆ ತಯಾರಾಗಿದ್ದ ತಂಡಕ್ಕೆ ಆ ದಿನ ಮಧ್ಯಾಹ್ನ ತನ್ನ ಮಗುವನ್ನು ಶಾಲೆಯಿಂದ ಕರೆದುಕೊಂಡು ಹೋಗಲು ಬಂದಿದ್ದ ಸುರೇಶ್ ಶೆಟ್ಟಿ, ಆತನ ಸಹೋದರ ಹಾಗೂ ಇನ್ನೊಬ್ಬ ಸ್ನೇಹಿತ ಮೂವರೂ ಒಂದೇ ಜಾಗದಲ್ಲಿ ಸಿಕ್ಕಿದ್ದು ಮತ್ತಷ್ಟು ಸಹಕಾರಿಯಾಯಿತೇನೋ.
ಕೂಡಲೇ ಮಚ್ಚು ಹಿಡಿದು ಎದುರು ಎಂಟ್ರಿಯಾದ ಯುವಕರನ್ನು ಕಂಡ ಸುರೇಶ್ ಶೆಟ್ಟಿ ಹಾಗೂ ಇತರ ಇಬ್ಬರು ಜೀವಭಯದಿಂದ ಸ್ಥಳದಿಂದ ಓಟಕ್ಕಿತ್ತಿದ್ದರು. ಈ ವೇಳೆ ಅಟ್ಟಾಡಿಸಿದ ತಂಡ ಮೂರು ಕಡೆಗಳಲ್ಲಿ ಮೂವರನ್ನು ಭೀಕರವಾಗಿ ಕೊಂದು ಜಾಗ ಖಾಲಿಮಾಡಿತ್ತು. ಕೊಲೆಯ ಸುದ್ದಿ ಹರಡುತ್ತಿದ್ದಂತೆ ಪಾಂಡೇಶ್ವರ ಠಾಣೆಯಲ್ಲಿ ಸುರೇಶ್ ಶೆಟ್ಟಿಯ ಇನ್ನೋರ್ವ ಸಹೋದರ ಚಿಲ್ಲಿ ನವೀನ ಎಂಬಾತ ದೂರು ದಾಖಲಿಸಿದ್ದು, ಕೊಲೆ ಆರೋಪಿಗಳ ಪರಿಚಯವಿಲ್ಲದೇ ಇದ್ದುದರಿಂದ ಕೊಲೆಗೆ ಸಂಬಂಧಪಡದ ಸುಮಾರು 12 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಚೇತು ಹಾಗೂ ಇತರ ಹನ್ನೊಂದು ಮಂದಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಯಲ್ಲಿ ಕೂರಿಸಿದ್ದರು.
ಇಲ್ಲಿ ಕೊಲೆ ನಡೆಸಿದ ಆರೋಪಿಗಳು ತಲೆಮರೆಸಿಕೊಂಡಿರುವುದು ಪೊಲೀಸರ ಗಮನಕ್ಕೂ ಬಂದಿಲ್ಲವೇನೋ. ಅತ್ತ ಕೊಲೆಗೆ ಸಂಬಂಧಪಡದ ವ್ಯಕ್ತಿಗಳನ್ನು ಬಂಧಿಸಿದ ಕೂಡಲೇ ಪ್ರಕರಣದ ನೈಜ ಆರೋಪಿಗಳು ಪೊಲೀಸರಿಗೆ ಶರಣಾಗಲು ಬಯಸಿದ್ದು, ಅದರಂತೆ ಪೊಲೀಸರು ಬೆಂಗಳೂರಿಗೆ ತೆರಳಿ ಅಲ್ಲಿನ ಲಾಡ್ಜ್ ಒಂದರಲ್ಲಿದ್ದ ಮೂವರನ್ನು ಹಾಗೂ ಇನ್ನೊರ್ವನನ್ನು ಚಿಕ್ಕಮಗಳೂರಿನಲ್ಲಿ ವಶಕ್ಕೆ ಪಡೆದು ವಿಚಾರಣೆಗೆಂದು ಕಡಬ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಯ ಬಳಿಕ ಮಂಗಳೂರಿಗೆ ಕರೆತಂದರು.
ಹೀಗೆ ಕರೆತರುತ್ತಿರುವ ವೇಳೆ ದಾರಿ ಮಧ್ಯೆ ಆರೋಪಿಗಳಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದು, ಪೊಲೀಸರ ಎದುರಲ್ಲೇ ಭಯದಿಂದ ವಿಷ ಕುಡಿದು ಸತ್ತರೆಂದು ಹೇಳಲಾಗಿದೆ. ಕೆಲವೊಂದು ಹೇಳಿಕೆಗಳ ಪ್ರಕಾರ ಪೊಲೀಸರೇ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವರ್ಷದ ಬಳಿಕ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಸಾಕ್ಷ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳ ಬಿಡುಗಡೆಯಾಯಿತು. ಕೃತ್ಯ ಎಸಗಿದ ಆರೋಪಿಗಳಲ್ಲಿ ಇಬ್ಬರು ಆಗತಾನೇ ಇಹಲೋಕ ತ್ಯಜಿಸಿದ್ದು, ಕೊಲೆಗೆ ಸಂಬಂಧಪಡದ ವ್ಯಕ್ತಿಗಳ ಸಹಿತ ಬಂಧಿತರೆಲ್ಲರನ್ನೂ ನ್ಯಾಯಾಲಯವು ದೋಷಮುಕ್ತಗೊಳಿಸಿತ್ತು. ಅಂದು ನಡೆದಿದ್ದ ಆ ತ್ರಿವಳಿ ಕೊಲೆಯ ಭೀಕರತೆ ಇಂದಿಗೂ ಬೋಳಾರ ಪರಿಸರದಲ್ಲಿ ಭೀತಿ ಹುಟ್ಟಿಸಿದ್ದು, ಪ್ರತ್ಯಕ್ಷದರ್ಶಿಗಳು ಘಟನೆಯನ್ನು ವಿವರಿಸುವಾಗ ಇಂದಿಗೂ ಭಯಬೀಳುತ್ತಿರುವುದಂತೂ ಸತ್ಯ.