ದೇವಿ ಜಾತ್ರೆಯ ಮೆರವಣಿಗೆಯಲ್ಲಿ ಹಿಂದೂಗಳ ಕೈ ಹಿಡಿದುಕೊಂಡು ಡ್ಯಾನ್ಸ್ ಮಾಡಿದ ಮುಸ್ಲಿಮರು !!
ರಾಜ್ಯದಲ್ಲಿ ಆಜಾನ್ ಮತ್ತು ಸುಪ್ರಭಾತ ನಡುವಿನ ಧರ್ಮ ದಂಗಲ್ ನಡುವೆಯೇ ಭಾವೈಕ್ಯತೆ ಸಾರುವ ದೃಶ್ಯಕ್ಕೆ ಸಿಲಿಕಾನ್ ಸಿಟಿ ಇಂದು ಸಾಕ್ಷಿಯಾಗಿದೆ. ಅಣ್ಣಮ್ಮದೇವಿ ಜಾತ್ರಾಮಹೋತ್ಸವದ ಮೆರವಣಿಗೆಯಲ್ಲಿ ಹಿಂದೂ ಮುಖಂಡರ ಜೊತೆ ಮುಸ್ಲಿಂ ಸಮುದಾಯದವರು ಡ್ಯಾನ್ಸ್ ಮಾಡಿ ಭಾವೈಕ್ಯತೆ ಸಾರಿದ್ದಾರೆ.
ಬೆಂಗಳೂರಿನ ಚಂದ್ರಾಲೇಔಟ್‍ನ ಗಂಗೋಂಡನಹಳ್ಳಿ ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯ ಪರಿಣಾಮ ಯಾವುದೇ ಜಾತ್ರೆ ಮಹೋತ್ಸವಗಳು ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಅಣ್ಣಮ್ಮದೇವಿ ಜಾತ್ರೆ ಮಹೋತ್ಸವ ನಡೆಯಿತು. ವಿಶೇಷವೆಂದರೆ ಗಂಗೊಂಡನಹಳ್ಳಿಯಲ್ಲಿ ಹಿಂದೂಗಳಿಗಿಂತ ಹೆಚ್ಚಾಗಿ ಮುಸ್ಲಿಮರೇ ವಾಸವಾಗಿದ್ದಾರೆ. ಅಣ್ಣಮ್ಮ ಜಾತ್ರೆ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಮರು ಎನ್ನುವ ಯಾವುದೇ ಭೇದ, ಭಾವ ಇಲ್ಲದೇ ಪರಸ್ಪರ ಕೈ, ಕೈ ಹಿಡಿದುಕೊಂಡು ದೇವಿ ಮುಂದೆ ಭರ್ಜರಿ ಡಾನ್ಸ್ ಮಾಡಿದ್ದಾರೆ.
ಮೆರವಣಿಗೆ ಪ್ರಾರಂಭದಿಂದ ಕೊನೆಯವರೆಗೂ ಮುಸ್ಲಿಮರು ಮೆರವಣಿಗೆಯಲ್ಲಿ ಭಾಗಿಯಾಗಿ ಹಿಂದೂಗಳಿಗೆ ಸಾಥ್ ನೀಡಿ ಭಕ್ತಿ ಭಾವದಿಂದ ಅಣ್ಣಮ್ಮ ತಾಯಿ ಕೃಪೆಗೆ ಪಾತ್ರರಾಗಿದ್ದಾರೆ. ದಿನ ಬೆಳಗಾದರೆ, ಧರ್ಮ-ಧರ್ಮಗಳ ನಡುವಿನ ಕಿತ್ತಾಟದ ನಡುವೆ ಈ ರೀತಿ ಭಾವೈಕ್ಯತೆ ಸಾರುವ ಅಪರೂಪದ ಘಟನೆಯಿಂದ ಎರಡು ಧರ್ಮದ ಜನರು ಫುಲ್ ಖುಷ್ ಆಗಿದ್ದಂತೂ ನಿಜ.