ವಿಟ್ಲ : ಎಸ್ ಎಸ್ ಎಲ್ ಸಿ ಮೃತ ಬಾಲಕಿ ಮನೆಯವರಿಗೆ ಹೊಸ ಮನೆ : ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಘೋಷಣೆ

ಬಂಟ್ವಾಳ ಶಾಸಕ, ರಾಜೇಶ್ ನಾಯ್ಕ ಅವರು ವಿಟ್ಲ ಕನ್ಯಾನದಲ್ಲಿ ಸಾವಿಗೀಡಾದ ಬಾಲಕಿ ಮನೆಗೆ ಶುಕ್ರವಾರ ಭೇಟಿ ನೀಡಿದ್ದು, ಬಾಲಕಿ ಮನೆಯವರೊಂದಿಗೆ ಮಾತಾಡಿದ ನಂತರ ಪ್ರಕರಣದ ತನಿಖೆಯನ್ನು ಪೋಲಿಸ್ ಇಲಾಖೆ ನಡೆಸುತ್ತಿದ್ದು ತಪ್ಪಿತಸ್ಥನಿಗೆ ಕಾನೂನಿನಡಿಯಲ್ಲೇ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ. ಪೋಷಕರಿಗೆ ಬಂಟ್ವಾಳ ಬಿಜೆಪಿ ಕ್ಷೇಮನಿಧಿಯಿಂದ ನೂತನ ಮನೆ ನಿರ್ಮಿಸುವುದಾಗಿ ಸ್ಥಳದಲ್ಲಿಯೇ ಶಾಸಕರು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಂಡಲದ ಪದಾಧಿಕಾರಿಗಳು, ಸಂಘ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.

 

ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನದ ಕಣಿಯೂರಿನಲ್ಲಿ ಮೇ. 4ರಂದು ಎಸ್ ಎಸ್ ಎಲ್ ಸಿ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ, ಆಕೆಯ ತಂದೆ ನೀಡಿದ ದೂರಿನ ಆಧಾರದಲ್ಲಿ ಆರೋಪಿ ಸಾಹುಲ್ ಹಮೀದ್ ಯಾನೆ ಕುಟ್ಟ ಎಂಬಾತನನ್ನು ವಿಟ್ಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕಣಿಯೂರು ಮಸೀದಿಯ ಹಿಂಭಾಗದ ಸುಲೈಮಾನ್
ಫೈಝಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿರುವ ಕೂಲಿ ಕಾರ್ಮಿಕ ಸಂಜೀವ ಎಂಬವರ ಅಪ್ರಾಪ್ತ ವಯಸ್ಸಿನ ಪುತ್ರಿ ಆತ್ಮೀಕಾ ಮೇ 4ರಂದು ಬೆಳಗ್ಗೆ 11.15ರ ವೇಳೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದ್ದಳು. ಸಾಹುಲ್ ಹಮೀದ್ ಎಂಬಾತ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ಆರೋಪಿಸಿ ಬಾಲಕಿಯ ತಂದೆ ದೂರು ನೀಡಿದ್ದು ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

Leave A Reply

Your email address will not be published.