ಬೆಳ್ತಂಗಡಿ: ಮಾಜಿ ಶಾಸಕ ವಸಂತ ಬಂಗೇರ ಅವರ ಕಾಲೇಜಿನಲ್ಲಿ ಲವ್ ಜಿಹಾದ್ ಕೂಗು!! | JJT- ಜಸ್ಟ್ ಜಿಹಾದಿ ಥಿಂಗ್ಸ್ ಎಂಬ ಇನ್ಸ್ಟಾಗ್ರಾಮ್ ಪೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯ ಫೋಟೋ ವೈರಲ್
ಬೆಳ್ತಂಗಡಿ: ತಾಲೂಕಿನ ಮಾಜಿ ಶಾಸಕ ವಸಂತ ಬಂಗೇರ ಅವರ ಒಡೆತನದ ಗುರುದೇವ ಕಾಲೇಜಿನಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ಲವ್ ಜಿಹಾದ್ ಎನ್ನುವ ಕೂಗೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಸತ್ಯಾಸತ್ಯತೆಯ ಬಗ್ಗೆ ತಿಳಿಯಲು ಪ್ರಕರಣವು ಪೊಲೀಸ್ ಠಾಣಾ ಮೆಟ್ಟಿಲೇರಿದೆ.
ಕಾಲೇಜಿನಲ್ಲಿ ಅಂದು ನಡೆದಿದ್ದೇನು?
ಕಳೆದ ಮೂರು ದಿನಗಳ ಹಿಂದೆ ಬೆಳ್ತಂಗಡಿಯ ಗುರುದೇವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ನಡೆದಿದ್ದು, ಈ ವೇಳೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಟ್ಟಿಗೇ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಮತ್ತು ತರಗತಿ ಕೊಠಡಿಯ ಒಂದು ಫೋಟೋವನ್ನು ಕ್ಲಿಕ್ಕಿಸಿ ಇರ್ಫಾನ್ ಎನ್ನುವ ಮುಸ್ಲಿಂ ವಿದ್ಯಾರ್ಥಿಯೊಬ್ಬ ಹಿಂದೂ ವಿದ್ಯಾರ್ಥಿನಿಯರ ಇನ್ಸ್ಟಾಗ್ರಾಮ್ ಪೇಜ್ ಅಕೌಂಟ್ ಟ್ಯಾಗ್ ಮಾಡಿ ಸ್ಟೋರಿ ಹಾಕಿಕೊಂಡಿದ್ದ. ಇದನ್ನು ಇನ್ನೂ ಕೆಲ ವಿದ್ಯಾರ್ಥಿಗಳು ಹಾಕಿಕೊಂಡಿದ್ದು, ಅಂತೆಯೇ ಹಿಂದೂ ವಿದ್ಯಾರ್ಥಿಯೂ ಸ್ಟೋರಿ ಹಾಕಿದ್ದಳು ಎನ್ನಲಾಗಿದೆ.
ಇದನ್ನು ಯಾರೋ ಕಿಡಿಗೇಡಿಗಳು ಸ್ಕ್ರೀನ್ ಶಾಟ್ ತೆಗೆದುಕೊಂಡು ಯುವತಿಯ ಫೋಟೋ ಹಾಕಿ ಲವ್ ಜಿಹಾದ್ ಎಂದು ಬಿಂಬಿಸಿ ಎಲ್ಲೆಡೆ ಶೇರ್ ಮಾಡಿದ್ದರು. ವಿಚಾರ ಗಮನಕ್ಕೆ ಬರುತ್ತಿದ್ದಂತೆ ಯುವತಿ ಹಾಗೂ ಯುವತಿಯ ಮನೆಯವರು ಎಚ್ಚೆತ್ತುಕೊಂಡಿದ್ದು ಪ್ರಕರಣದ ಗಂಭೀರತೆ ಅರಿತು ಬೆಳ್ತಂಗಡಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.
ವೈರಲ್ ಮಾಡಿದ JJT ಅಕೌಂಟ್ ಯಾವುದು!?
ಹೌದು. ಇಂತಹ ವಿಚಾರಗಳನ್ನು ಎಲ್ಲೆಡೆ ಹಬ್ಬಿಸಲೆಂದೇ ಅದೊಂದು ಪೇಜ್ ಸದಾ ಮುಂಚೂಣಿಯಲ್ಲಿದೆಯಂತೆ.ಸುಳ್ಳು ಸುದ್ದಿಯೊಂದು ಇಷ್ಟು ವೈರಲ್ ಆಗುವ ಹಿಂದೆ ‘ಜಸ್ಟ್ ಜಿಹಾದಿ ಥಿಂಗ್ಸ್’ ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರ ಪಾತ್ರವಿದ್ದು, ಈ ಮೊದಲು ಇಂತಹ ವಿಚಾರಗಳನ್ನು ಯುವಕ-ಯುವತಿಯ ಫೋಟೋ ಹಾಕಿ ಶೇರ್ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಒಮ್ಮೆ ಪೋಸ್ಟ್ ಆದ ವಿಚಾರವನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ತೆಗೆಯುವುದಿಲ್ಲ, ಒಂದೊಮ್ಮೆ ಯುವತಿಯ ಹೆತ್ತವರು ಅಂಗಲಾಚಿದಲ್ಲಿ ಡಿಲೀಟ್ ಮಾಡುತ್ತೇವೆ ಎನ್ನುವ ಈ ಖಾತೆಗೆ ಸಂಬಂಧಪಟ್ಟವರು ಯಾರು ಎನ್ನುವುದು ಈಗ ನಿಗೂಢವಾಗುಳಿದಿದೆ.
ಅದೇನೇ ಇರಲಿ. ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಎನ್ನುವ ಪದವೊಂದು ಹೆಚ್ಚು ಸದ್ದು ಮಾಡುತ್ತಿದ್ದು, ಮುಸ್ಲಿಂ ಯುವಕರೊಂದಿಗೆ ಹಿಂದೂ ಯುವತಿಯರು ಸುತ್ತಾಟ ನಡೆಸಿದಾಗ ಮಾತ್ರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಆದರೆ ಸುಖಾಸುಮ್ಮನೆ ಓರ್ವ ಯುವತಿಯ ಫೋಟೋ ಸಹಿತ ಅಶ್ಲೀಲ ಪದಗಳನ್ನು ಬಳಸಿ ವೈರಲ್ ಮಾಡುವ ಕೃತ್ಯದ ಹಿಂದೆ ಕಾಣದ ಕೈಯೊಂದು ಸಹಕರಿಸಿದೆ ಎನ್ನುವ ಅನುಮಾನವನ್ನು ಇಡೀ ಬೆಳ್ತಂಗಡಿಯ ಜನತೆ ವ್ಯಕ್ತಪಡಿಸಿದ್ದು, ಇನ್ನೊಂದೆಡೆ ತನ್ನ ಸಹಪಾಠಿಯೇ ಆಕೆಯ ಹೆಸರು ಕೆಡಿಸಲು ಮುಂದಾಗಿದ್ದಾನೆಯೇ ಎನ್ನುವ ಅನುಮಾನವೂ ವ್ಯಕ್ತವಾಗಿದೆ. ಸದ್ಯ ಪ್ರಕರಣವು ಸಿ.ಸಿ.ಬಿ ಪೊಲೀಸರಿಂದ ತನಿಖೆಗೆ ಒಳಗಾಗಿದ್ದು, ಸುಳ್ಳು ಸುದ್ದಿ ಹಬ್ಬಿಸಿ, ಯುವತಿ ಹಾಗೂ ಕಾಲೇಜಿನ ಬಗ್ಗೆ ಅಪಪ್ರಚಾರ ನಡೆಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಶೀಘ್ರವೇ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಇಂತಹ ವಿಷಯಗಳಿಗೆ ಯುವತಿಯರು ಹೋಗುವ ಮುನ್ನ ಎಚ್ಚೆತ್ತುಕೊಂಡರೆ ಒಳ್ಳೆಯದು.