ಹೆಸರಾಂತ ಕನ್ನಡ ಸೀರಿಯಲ್ “ಕಮಲಿ”ಯ ನಿರ್ದೇಶಕ ಅರವಿಂದ್ ಕೌಶಿಕ್ ಬಂಧನ

ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಹೆಸರು ಮಾಡಿದ ಅರವಿಂದ್ ಕೌಶಿಕ್ ಅವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಧಾರಾವಾಹಿ ನಿರ್ಮಾಪಕನೋರ್ವನಿಂದ ಹಣಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಕನ್ನಡದ ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ನಮ್ ಏರಿಯಾದಲ್ಲಿ ಒಂದಿನ, ಹುಲಿರಾಯ ಹಾಗೂ ಶಾರ್ದೂಲ ಇಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕೌಶಿಕ್ ನಿರ್ದೇಶನ ಮಾಡಿ ಸಕ್ಸಸ್ ಕಂಡವರು. ಕನ್ನಡ ಕಿರುತೆರೆಯಲ್ಲಿ ಮೂಡಿಬಂದ ಕಮಲಿ ಧಾರವಾಹಿಯನ್ನು ಕೂಡ ನಿರ್ದೇಶನ ಮಾಡಿದ್ದಾರೆ.

ಆರೋಪ ಏನೆಂದರೆ, ಕಮಲಿ ಧಾರವಾಹಿ ನಿರ್ಮಾಣ ಮಾಡಲಿಕ್ಕೆ ನಿರ್ಮಾಪಕ ರೋಹಿತ್ ಎಂಬುವವರು 73 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರಂತೆ. 2018 ರಲ್ಲಿ ಕಮಲಿ ಸೀರಿಯಲ್ ನಿರ್ಮಾಣಕ್ಕೆ ರೋಹಿತ್ ಹಣ ಹೂಡಿಕೆ ಮಾಡಿದ್ದರಂತೆ. ಆದರೆ, ಧಾರವಾಹಿ ತೆರೆಕಂಡ ನಂತರ ಹಣ ಹಿಂತಿರುಗಿಸದೇ, ಲಾಭಾಂಶವನ್ನೂ ನೀಡದೇ ವಂಚನೆ ಮಾಡಿದ್ದಾರೆ ಎಂದು ಕೌಶಿಕ್ ವಿರುದ್ಧ ರೋಹಿತ್ ಆರೋಪ ಮಾಡಿದ್ದಾರೆ.

ಈ ಸಂಬಂಧ ನಿರ್ಮಾಪಕ ರೋಹಿತ್ ವೈಯ್ಯಾಲಿಕಾವಲ್ ಠಾಣೆಗೆ ದೂರು ನೀಡಿದ್ದಾರೆ. ಅರವಿಂದ್ ಕೌಶಿಕ್ ವಿರುದ್ಧ 420 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು, ಸದ್ಯ ವೈಯ್ಯಾಲಿಕಾವಲ್ ಪೊಲೀಸರು ಅರವಿಂದ್ ಕೌಶಿಕ್‌ರನ್ನು ಬಂಧಿಸಿದ್ದಾರೆ.

Leave A Reply

Your email address will not be published.