ಪೊಲೀಸ್ ಠಾಣೆ ಮುಂಭಾಗದಲ್ಲೇ ನಡೆಯಿತು ವ್ಯಕ್ತಿಯ ಕಿಡ್ನಾಪ್ !! | ಏರ್‌ಫೈರ್ ಮಾಡಿ ಕಿಡ್ನಾಪ್ ಮಾಡಿದ ಮೂವರು ಆರೋಪಿಗಳು ಅರೆಸ್ಟ್
ಒಬ್ಬ ವ್ಯಕ್ತಿಯನ್ನು ಕಿಡ್ನಾಪ್ ಮಾಡುವುದೆಂದರೆ ಅದು ಸುಲಭದ ಮಾತಲ್ಲ. ಕಿಡ್ನಾಪ್ ಮಾಡುವ ಸಂದರ್ಭದಲ್ಲಿ ಸಿಕ್ಕಿಬೀಳುವವರೇ ಹೆಚ್ಚು. ಆದರೆ ಇಲ್ಲಿ ಸಿನಿಮೀಯ ರೀತಿಯಲ್ಲಿ ಪೊಲೀಸ್ ಠಾಣೆ ಮುಂಭಾಗದಲ್ಲೇ ಏರ್‌ಫೈರ್ ಮಾಡಿ ವೆಬ್ ಡಿಸೈನರ್‌ರೊಬ್ಬರನ್ನು ಕಿಡ್ನಾಪ್ ಮಾಡಿದ ಆಶ್ಚರ್ಯಕಾರಿ ಘಟನೆ ಯಲಹಂಕ ಪೊಲೀಸ್ ಠಾಣಾ ಬಳಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅಮರ್ ಪಾಂಡೆ ಕಿಡ್ನಾಪ್ ಆದ ವ್ಯಕ್ತಿ. ಅಮರ್ ಅವರು ಚೈತನ್ಯ ಶರ್ಮಾ ಎನ್ನುವವನ ಕಂಪನಿಗೆ ವೆಬ್ ಡಿಸೈನ್ ಮಾಡಿಕೊಟ್ಟಿದ್ದರು. ಆದರೆ ವೆಬ್ ಡಿಸೈನ್ ಮಾಡಿದ್ದ ಹಣ ನೀಡದೆ ಉದ್ಯಮಿ ಚೈತನ್ಯ ಸತಾಯಿಸಿದ್ದ. ಇದರಿಂದ ಕೋಪಗೊಂಡ ಡಿಸೈನರ್ ಅಮರ್ ಪಾಂಡೆ ವೆಬ್‍ಸೈಟ್ ಡೇಟಾ ಅಳಿಸಿ ಹಾಕಿದ್ದರು. ಡೇಟಾ ಅಳಿಸಿ ಹಾಕಿದ ಪರಿಣಾಮ ಉದ್ಯಮಿಯು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದನು. ಹಾಗಾಗಿ ಚೈತನ್ಯ ಅಂದಿನಿಂದ ವೆಬ್ ಡಿಸೈನರ್ ಅಮರ್ ಅವರ ಹುಡುಕಾಟ ನಡೆಸಿದ್ದ.
ಏ. 23 ರಂದು ಅಪರಿಚಿತ ವ್ಯಕ್ತಿಯಿಂದ ಕಾಲ್ ಮಾಡಿ ವೆಬ್ ಡಿಸೈನ್ ಬಗ್ಗೆ ಮಾತುಕತೆಗೆ ಕರೆಸಿದ್ದರು. ಈ ವೇಳೆ ಚೈತನ್ಯ ಶರ್ಮಾ ಹಾಗೂ ಮೂವರು ಪೊಲೀಸ್ ಠಾಣೆ ಮುಂಭಾಗದಲ್ಲೇ ಏರ್ ಫೈರ್ ಮಾಡಿ ಬೆದರಿಸಿ ಅಮರ್ ಪಾಂಡೆಯನ್ನು ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಮಾಡಿ ಆರೂವರೆ ಲಕ್ಷ ಹಣ ಪಡೆದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ಪೊಲೀಸರು ಉದ್ಯಮಿ ಸೇರಿ ಮೂವರನ್ನು ಬಂಧಿಸಲಾಗಿದೆ. ಚೈತನ್ಯ ಶರ್ಮಾ, ವೈಭವ್ ಹಾಗೂ ಅಮಿತ್ ಬಂಧಿತ ಆರೋಪಿಗಳು. ಆದರೆ ಈ ಕೃತ್ಯ ಪೊಲೀಸ್ ಠಾಣೆಯ ಎದುರಲ್ಲೇ ನಡೆದರೂ ಯಾರ ಗಮನಕ್ಕೂ ಬಾರದಿರುವುದು ಆಶ್ಚರ್ಯವೇ ಸರಿ.