1987 ರಲ್ಲಿ ಮಂಗಳೂರಿನ ಪತ್ರಿಕಾ ಸಂಪಾದಕರು ದಾಖಲಿಸಿದ್ದ ಪ್ರಕರಣಕ್ಕೆ ಮರುಜೀವ!! ಸುಳ್ಳು ದಾಖಲೆ ಸೃಷ್ಟಿಸಿದ್ದ ನಿವೃತ್ತ ಐ.ಪಿ.ಎಸ್ ಕೆಂಪಯ್ಯ ವಿಚಾರಣೆಗೆ ಗೈರು
ಸುಳ್ಳು ಜಾತಿ ಪ್ರಮಾಣಪತ್ರ ದಾಖಲೆ ನೀಡಿ ಕೆಲಸಗಿಟ್ಟಿಸಿಕೊಂಡ ಆರೋಪ ಹೊತ್ತಿರುವ ನಿವೃತ್ತ ಐ.ಪಿ.ಎಸ್ ಅಧಿಕಾರಿ ಕೆಂಪಯ್ಯ ಅವರಿಗೆ ನೋಟೀಸ್ ನೀಡಲಾಗಿದ್ದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನೀರಿಕ್ಷಕ(ಡಿ.ಐ.ಜಿ) ಡಾ.ರವೀಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕರ್ನಾಟಕ ಲೋಕಾಯುಕ್ತದಲ್ಲಿ 1987-88 ರಲ್ಲಿ ದಾಖಲಾಗಿದ್ದ ಈ ಪ್ರಕರಣ ಸುಮಾರು 30 ವರ್ಷಗಳ ಬಳಿಕ ಅಂದರೆ ಕೆಂಪಯ್ಯ ಅವರ ನಿವೃತ್ತಿಯ ನಂತರ ಮರು ಜೀವ ಪಡೆದುಕೊಂಡಿದ್ದು, ತನಿಖೆಗೂ ಆದೇಶವಾಗಿತ್ತು.ಅದರಂತೆ ತನಿಖೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ್ದು, ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮನೆಯ ಗೋಡೆಗೆ ನೋಟೀಸ್ ಅಂಟಿಸಿಬರಲಾಗಿದೆ ಎಂದು ಅವರು ತಿಳಿಸಿದರು.
ಮಂಗಳೂರಿನ ಖ್ಯಾತ ಪತ್ರಿಕಾ ಸಂಪಾದಕರಿಂದ ಬಯಲಾಗಿತ್ತು ಸುಳ್ಳು ದಾಖಲೆಯ ವಿಚಾರ
ಹೌದು.1987-88 ರಲ್ಲಿ ಬಯಲಿಗೆ ಬಂದಿದ್ದ ಈ ಸುಳ್ಳು ದಾಖಲೆಯ ಪ್ರಕರಣ ಬಯಲಿಗೆಳೆವಲ್ಲಿ ಮಂಗಳೂರಿನ ಖ್ಯಾತ ಪತ್ರಕರ್ತ, ಅಮೃತ ಪತ್ರಿಕೆಯ ಸಂಪಾದಕ ಕೆ. ಶಂಕರ್ ಭಟ್ ಅವರ ಪಾತ್ರ ಮಹತ್ತರವಾಗಿತ್ತು. ಸದಾ ಅನ್ಯಾಯಗಳ ವಿರುದ್ಧ, ಪೊಲೀಸ್ ದೌರ್ಜನ್ಯ,ಕೆಲ ಅಧಿಕಾರಿ ವರ್ಗ, ಹಾಗೂ ಕೆಲ ನಾಯಕರ ಸರಿ ತಪ್ಪುಗಳನ್ನು ಗುರುತಿಸಿ ವರದಿ ಬಿತ್ತರಿಸುತ್ತಿದ್ದ ಭಟ್ಟರಿಗೆ ಈ ವಿಚಾರ ಗಮನಕ್ಕೆ ಬಂದಿತ್ತು.ಓರ್ವ ಐಪಿಎಸ್ ದರ್ಜೆಯ ಅಧಿಕಾರಿಯ ಬಗೆಗಿನ ವಿವರಗಳು ಕಚೇರಿಯಲ್ಲಿ, ಅದರಲ್ಲೂ ಅವರ ಛೇಂಬರ್ ನಲ್ಲಿ ಇರುವುದು ಬಿಟ್ಟರೆ ಹೊರಗೆ ಸಿಗುವುದು ಕಷ್ಟ.
ಆದರೆ ಕೆಲ ಪೊಲೀಸರಿಂದಲೇ ಈ ವಿಚಾರ ಭಟ್ಟರ ಗಮನಕ್ಕೆ ಬಂದಿದ್ದು, ಕೂಡಲೇ ಭಟ್ಟರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಇತ್ತ ಭಟ್ಟರ ವಿರುದ್ಧ ಕೋಪಗೊಂಡ ಕೆಂಪಯ್ಯ, ತನ್ನ ಖಾಸಗಿ ವಿವರಗಳನ್ನು ಪಡೆದ ವಿಚಾರವನ್ನು ಹೇಗಾದರೂ ಮಾಡಿ ಬಾಯಿಬಿಡಿಸಬೇಕೆಂದು ಬಕಪಕ್ಷಿಯಂತೆ ಹೊಂಚು ಹಾಕಿ ಕುಳಿತಂತಹ ಸಂದರ್ಭ ಶಂಕರ್ ಭಟ್ ರನ್ನು ಬೇರೊಂದು ಪ್ರಕರಣದ ಹಿನ್ನೆಲೆಯಲ್ಲಿ ಉಪಾಯದಲ್ಲಿ ಠಾಣೆಗೆ ಕರೆಸಿಕೊಂಡು, ಅಲ್ಲೇ ಬಂಧಿಸಿ ಬೆತ್ತಲೆಗೊಳಿಸಿ ರೌದ್ರಾವತಾರವೇ ಮೆರೆದಿದ್ದರು. ಕೆಂಪಯ್ಯನವರ ಜೊತೆ ಇನ್ನೂ ಕೆಲ ಭಟ್ಟರ ವಿರೋಧಿ ಅಧಿಕಾರಿಗಳು ಕೈಜೋಡಿಸಿದ್ದು, ಆ ರಾತ್ರಿ ಬಂದರು ಪೊಲೀಸ್ ಠಾಣೆಯಲ್ಲಿ ಭಟ್ಟರಿಗೆ ಕೊಡಬಾರದ ಚಿತ್ರಹಿಂಸೆ ನೀಡಿ ವಿಚಾರಿಸಿದ್ದರಾದರೂ, ಭಟ್ಟರು ಮಾತ್ರ ಇಲಾಖೆಯಿಂದ ಮಾಹಿತಿಕೊಟ್ಟವರು ಯಾರು ಎನ್ನುವ ಸತ್ಯವನ್ನು ಬಾಯಿಬಿಟ್ಟಿರಲಿಲ್ಲ.
ಮಾರನೇ ದಿನ ಕೋರ್ಟ್ ನಲ್ಲಿ ತನ್ನ ಮೇಲಿನ ಹಲ್ಲೆಯನ್ನು ಭಟ್ಟರು ವಿವರಿಸಿದ್ದು,ಕೆಂಪಯ್ಯ ಹಾಗೂ ಇನ್ನಿತರ ಅಧಿಕಾರಿಗಳ ಹೆಸರುಗಳನ್ನೂ ಹೇಳಿದ್ದರು. ನ್ಯಾಯಧೀಶರ ಆದೇಶದ ಮೇರೆಗೆ ಭಟ್ಟರನ್ನು ಆಸ್ಪತ್ರೆಗೆ ದಾಖಲಿಸಿ ಕೆಲವೇ ಕೆಲ ನಿಮಿಷದಲ್ಲಿ ಮತ್ತೊಮ್ಮೆ ಬಂಧಿಸಲು ಕೆಂಪಯ್ಯ ಆಸ್ಪತ್ರೆಗೆ ಧಾವಿಸಿದಾಗ ಭಟ್ಟರ ಹಿತೈಷಿಗಳು ಸೇರಿ ತಪ್ಪಿಸಿಕೊಳ್ಳುವಲ್ಲಿ ಸಹಕರಿಸಿದ್ದರು. ಆ ಬಳಿಕ ಕೆಂಪಯ್ಯ ದಕ್ಷಿಣ ಕನ್ನಡ ಜಿಲ್ಲೆಯಿಂದ ವರ್ಗಾವಣೆಗೊಂಡಿದ್ದು, ಆ ಪ್ರಕರಣ ಮಾತ್ರ ಇನ್ನೂ ಜೀವಂತವಿದೆ. ಸದ್ಯ ತನ್ನ ಮೇಲಿನ ಖಾಕಿ ಖದರ್, ಅಧಿಕಾರದ ಮದ ಎಲ್ಲವಕ್ಕೂ ನಿವೃತ್ತಿಯಾಗಿದ್ದರೂ, ಮಾಡಿದ್ದುಣ್ಣೋ ಮಾರಾಯ ಎಂಬಂತೆ ಇಳಿ ವಯಸ್ಸಿನಲ್ಲಿ ವಿಚಾರಣೆಗೆ ಹಾಜರಾಗುವುದು ಕಟ್ಟಿಟ್ಟ ಬುತ್ತಿಯಾಗಿದೆ.