ಐಪಿಎಲ್ ನಲ್ಲಿ ಆಡಲು ಪಾಕ್ ಆಟಗಾರನಿಗೆ ಆಹ್ವಾನ ನೀಡಿದ್ದರಂತೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ !!
ಸದ್ಯ ಈ ಬೇಸಿಗೆಯಲ್ಲಿ ಚುಟುಕು ಕ್ರಿಕೆಟ್ ನ ರಸದೌತಣ ಪ್ರೇಕ್ಷಕರಿಗೆ ದೊರೆಯುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಆವೃತ್ತಿಯು ಯಶಸ್ವಿಯಾಗಿ ನಡೆಯುತ್ತಿದ್ದು, ಐಪಿಎಲ್‌ನಲ್ಲಿ ಈ ಹಿಂದೆ ಎಂಟು ತಂಡಗಳಿದ್ದವು. ಆದರೆ ಈ ಬಾರಿ ಹೊಸದಾಗಿ ಎರಡು ತಂಡಗಳು ಸೇರ್ಪಡೆಗೊಂಡಿದ್ದು, ಈ ಮೂಲಕ ಹತ್ತು ತಂಡಗಳು ಕಣಕ್ಕಿಳಿದಿವೆ.
ಈ ತಂಡಗಳಲ್ಲಿ ವಿದೇಶಿ ಆಟಗಾರರೂ ಇದ್ದಾರೆ. ಆದರೆ ಪಾಕಿಸ್ತಾನದ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿಲ್ಲ. ಕಾರಣ 2008ರಲ್ಲಿ ಮುಂಬೈ ನಗರದಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ರಾಜಕೀಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ.
ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯಾಸಿರ್ ಅರಾಫತ್ ಎಂಬವರು ಇಂಡಿಯನ್ ಪ್ರೀಮಿಯರ್ ಲೀಗ್ ಕುರಿತು ಮಾತನಾಡಿದ್ದು, ತಮ್ಮನ್ನು ಟೂರ್ನಿಯಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್ ಆಹ್ವಾನ ನೀಡಿದ್ದರು ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
“ಪಾಕಿಸ್ತಾನ ಕ್ರಿಕೆಟ್ ಬೋರ್ಡ್ 2008ರ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದೇ ಇದ್ದ ಕಾರಣ ನಾನು ಆ ಟೂರ್ನಿಯಲ್ಲಿ ಭಾಗವಹಿಸಲಿಲ್ಲ. ಇನ್ನು 2008ರಲ್ಲಿ ನಾನು ಕೆಂಟ್ ಪರ ಕೌಂಟಿ ಕ್ರಿಕೆಟ್ ಆಡುತ್ತಿದ್ದೆ. ಆ ಸಂದರ್ಭದಲ್ಲಿ ನನ್ನನ್ನು ತಂಡವೊಂದು ಭೇಟಿ ಮಾಡಿ, ಶಾರುಖ್ ಖಾನ್ ನಿಮಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಟವಾಡುವಂತೆ ಆಫರ್ ನೀಡಿದ್ದಾರೆ ಎಂದು ಹೇಳಿದ್ದರು. ಮೊದಲು ನಾನು ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡೆ. ಆದರೆ ನಂತರ ವಿಸಿಟಿಂಗ್ ಕಾರ್ಡ್ ನೀಡಿ ನನ್ನ ವಿವರ ಪಡೆದುಕೊಂಡರು” ಎಂದರು.
“ಆದರೆ ನಾನು ಫ್ರಾಂಚೈಸಿಯನ್ನು ಸಂಪರ್ಕಿಸಲಿಲ್ಲ. ಈ ಹಿನ್ನೆಲೆಯಲ್ಲಿ ನನಗೆ ಒಂದು ಇಮೇಲ್ ಸಂದೇಶ ಕೂಡ ಬಂದಿತ್ತು. ಆದರೆ ಕೆಲ ದಿನಗಳ ಬಳಿಕ ಇದೆಲ್ಲಾ ನಿಂತುಹೋಯಿತು. ನಂತರ ಮತ್ತೊಮ್ಮೆ ತನ್ನನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸಂಪರ್ಕಿಸಿತ್ತು. ಅಷ್ಟೇ ಅಲ್ಲದೆ, 3 ವರ್ಷಗಳ ಒಪ್ಪಂದದ ಕುರಿತು ಸಹ ಮಾತನಾಡಿತ್ತು. ಸ್ವತಃ ಶಾರುಖ್ ಖಾನ್ ನನ್ನ ಜೊತೆ ಮಾತನಾಡಿ ಆಹ್ವಾನ ನೀಡಿದ್ದರು” ಎಂದಿದ್ದಾರೆ.
ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರಿಗೆ ಭಾಗವಹಿಸಲು ಬಿಸಿಸಿಐ ಅನುಮತಿಯನ್ನು ನೀಡಿಲ್ಲ. ಆದರೆ ಮೊದಲನೇ ಆವೃತ್ತಿಯ ಟೂರ್ನಿ ನಡೆದಾಗ ಆ ಆವೃತ್ತಿಯಲ್ಲಿ ಪಾಕಿಸ್ತಾನ ಆಟಗಾರರಾದ ಶೋಯೆಬ್ ಅಖ್ತರ್, ಶೋಯೆಬ್ ಮಲಿಕ್, ಶಾಹಿದ್ ಅಫ್ರಿದಿ, ಮೊಹಮ್ಮದ್ ಆಸಿಫ್, ಕಮ್ರಾನ್ ಅಕ್ಮಲ್ ಮತ್ತು ಸೊಹೇಲ್ ತನ್ವೀರ್ ಸೇರಿದಂತೆ ಇನ್ನೂ ಹಲವರು ಭಾಗವಹಿಸಿದ್ದರು.