ಮಂಗಳೂರು : ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ ಆರೋಪ| ಬಜ್ಪೆ ಠಾಣೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು
ಬಜ್ಪೆ: ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಬಜ್ಪೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಂಘಪರಿವಾರ ಕಾರ್ಯಕರ್ತರು ಬಜ್ಪೆ ಪೊಲೀಸ್ ಠಾಣೆಗೆ ರವಿವಾರ ಮುತ್ತಿಗೆ ಹಾಕಿ ಇನ್ ಸ್ಪೆಕ್ಟರ್ ಸಹಿತ ಐವರು ಪೊಲೀಸರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಬಿಜೆಪಿ ಮುಖಂಡ ಕಸ್ತೂರಿ ಪಂಜ ಸಹಿತ ಹಲವು ಸಂಘಪರಿವಾರದ ನಾಯಕರು ಪೊಲೀಸ್ ಆಯುಕ್ತರು ಹಾಗೂ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
“ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೂವರನ್ನು ಠಾಣೆಗೆ ಕರೆಸಿಕೊಂಡ ಇನ್‌ಸ್ಪೆಕ್ಟರ್, ಇಬ್ಬರಿಗೆ ಮಾನವೀಯತೆ ಮರೆತು ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಅವರ ಮನೆಯ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಕೂಡಲೇ ಹಲ್ಲೆ, ಮಹಿಳೆಯರನ್ನು ನಿಂದಿಸಿದ ಪೊಲೀಸರನ್ನು ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು” ಬಿಜೆಪಿ ಮುಖಂಡ ಕಸ್ತೂರಿ ಪಂಜ ಒತ್ತಾಯಿಸಿದ್ದಾರೆ.
ಮಾಜಿ ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಡಾ. ಸೋಂದಾ ಭಾಸ್ಕರ್ ಭಟ್ ಹಾಗು ಇತರರು ಪ್ರತಿಭಟನೆಯಲ್ಲಿ ಮಾತನಾಡಿದರು.
ಪ್ರತಿಭಟನೆಯ ಬಳಿಕ ಮನವಿಯನ್ನು ಸ್ವೀಕರಿಸಿದ ಎಸಿಪಿ ಮಹೇಶ್ ಕುಮಾರ್ ಮಾತನಾಡಿ, ಉನ್ನತ ತಂಡದಿಂದ ತನಿಖೆ ನಡೆಸಿ ಮೂರು ದಿನದೊಳಗೆ ವರದಿ ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಭರವಸೆ ನೀಡಿದರು.