ಮಂಗಳೂರು : ದಾರಿ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕಸಿದ ಆರೋಪಿಗಳ ಸಹಿತ ಕದ್ದ ಮಾಲು ಖರೀದಿಸಿದ್ದ ಜ್ಯುವೆಲ್ಲರಿ ಮಾಲಕರ ಬಂಧನ !!!
ಮಂಗಳೂರು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಬ್ಬರ ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಮತ್ತು ಆ ಸರವನ್ನು ಖರೀದಿಸಿದ್ದ ಜುವೆಲ್ಲರಿಯ ಮಾಲಕರಿಬ್ಬರನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ವಾಮಂಜೂರಿನ ಆರೀಫ್ (26) ಮತ್ತು ಕಾವೂರಿನ ಮುಹಮ್ಮದ್ ಹನೀಫ್ (36) ಬಂಧಿತ ಆರೋಪಿಗಳು. ಈ ಆರೋಪಿಗಳಿಂದ ಚಿನ್ನಾಭರಣವನ್ನು ಖರೀದಿಸಿದ್ದ ಅಬ್ದುಲ್ ಸಮದ್ ಪಿಪಿ ಮತ್ತು ಮುಹಮ್ಮದ್ ರಿಯಾಝ್ ಎಂಬಿಬ್ಬರು ಜುವೆಲ್ಲರಿ ಅಂಗಡಿಯ ಮಾಲಕರನ್ನೂ ಕೂಡಾ ಪೊಲೀಸರು ಬಂಧಿಸಲಾಗಿದೆ.
ಎ.12ರಂದು ಸಂಜೆ 5.40ರ ಸುಮಾರಿಗೆ ನೀರುಮಾರ್ಗದ ಪಾಲ್ದನೆ ಎಂಬಲ್ಲಿ ಮಮತಾ ಎಂಬವರು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೀಫ್ ಮತ್ತು ಹನೀಫ್ ದಾರಿ ಕೇಳುವ ನೆಪದಲ್ಲಿ, ಮಮತಾ ಅವರ ಕುತ್ತಿಗೆಯಲ್ಲಿದ್ದ 8 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಾರೆ.
ಇಷ್ಟು ಮಾತ್ರವಲ್ಲದೇ ಆರೋಪಿ ಹನೀಫ್ ಈ ಮೊದಲು ಕೆಲರಾಯ್ ಬಳಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನವನ್ನು ಕದ್ದು, ಅದೇ ವಾಹಬದಲ್ಲಿ ದ್ವಿಚಕ್ರ ವಾಹನ ಬಳಸಿ ಬೊಲ್ಪುಗುಡ್ಡೆಯ ವತ್ಸಲಾ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ದಾರಿ ಕೇಳುವ ನೆಪದಲ್ಲಿ 10 ಗ್ರಾಂ ತೂಕದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ. ಇವರು ಕಸಿದು ತಂದ ಮಾಂಗಲ್ಯ ಸರವನ್ನು ಕಾವೂರಿನ ನಕ್ಷತ್ರ ಜುವೆಲ್ಲರಿ ಶಾಪ್ನ ಮಾಲಕರಾದ ಅಬ್ದುಲ್ ಸಮದ್ ಮತ್ತು ಮುಹಮ್ಮದ್ ರಿಯಾಝ್ ಖರೀದಿಸಿದ್ದರು. ಹಾಗಾಗಿ ಪೊಲೀಸರು ಮಾಂಗಲ್ಯದ ಸರ ಕಸಿದ ಹಾಗೂ ಅದನ್ನು ಖರೀದಿಸಿದವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 80 ಸಾವಿರ ರೂ. ಮೌಲ್ಯದ 18 ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು 50 ಸಾವಿರ ರೂ. ಮೌಲ್ಯದ ಎರಡು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.